ಗುರು ಪೂರ್ಣಿಮೆಯ ಅಂಗವಾಗಿ ಕೆ.ಆರ್.ಪೇಟೆ ಪಟ್ಟಣದ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಯುಗಯೋಗಿ, ಪದ್ಮಭೂಷಣ, ತ್ರಿವಿಧ ದಾಸೋಹಿ, ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಪುತ್ತಳಿಗೆ ಅಭಿಷೇಕ, ಪುಷ್ಪಾಭಿಷೇಕ ಹಾಗೂ ಪೂಜೆ ಪುರಸ್ಕಾರಗಳು ಶ್ರದ್ಧಾಭಕ್ತಿಯಿಂದ ನಡೆದವು .

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಹೇಮಗಿರಿ ಶಾಖೆಯ ಗೌರವ ಕಾರ್ಯದರ್ಶಿಗಳಾದ ಡಾ. ಜೆ.ಎನ್.ರಾಮಕೃಷ್ಣೇಗೌಡ ಅವರು ಭೈರವೈಕ್ಯ ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಪುತ್ತಳಿಗೆ ಅಭಿಷೇಕ ಮಾಡಿ, ವಿಶೇಷ ಪೂಜೆ ಸಲ್ಲಿಸಿ ಗುರುಗಳ ಗುಣಗಾನ ಮಾಡಿ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ಹಿರಿಯರನ್ನು ಸನ್ಮಾನಿಸಿ ಗೌರವಿಸಿದರು.

ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸಿ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಮಾರ್ಗದರ್ಶನ ಮಾಡಿ, ದಾರಿ ತೋರಿದ ಗುರುವನ್ನು ಭಕ್ತಿಯಿಂದ ಸ್ಮರಿಸಿ ಪೂಜೆ ಮಾಡುವುದು ನಮ್ಮ ಸನಾತನ ಹಿಂದೂ ಧರ್ಮದ ಒಂದು ಭಾಗವಾಗಿದೆ. ಇಂದು ಗುರುಪೂರ್ಣಿಮೆಯ ಪುಣ್ಯ ದಿನವಾಗಿರುವುದರಿಂದ ಗುರುಗಳ ನಾಮಸ್ಮರಣೆ ಮಾಡಿ ಅವರು ತೋರಿದ ದಾರಿಯಲ್ಲಿ ಸಾಗುವುದಲ್ಲದೆ ಇನ್ನೂ ಹೆಚ್ಚಿನ ಜನಪರವಾದ ಸೇವೆ ಮಾಡುವ ಶಕ್ತಿ ನೀಡುವಂತೆ ಗುರುವಿನಲ್ಲಿ ಪ್ರಾರ್ಥಿಸಿ , ಸಮಾಜಮುಖಿಯಾಗಿ ಹೆಜ್ಜೆ ಹಾಕಲು ಇಂದು ಪ್ರಶಸ್ತವಾದ ದಿನವಾಗಿದೆ. ಇಂದಿನ ಕಾರ್ಯಕ್ರಮಕ್ಕೆ ನೂರಾರು ಸಂಖ್ಯೆಯಲ್ಲಿ ಹಿರಿಯರು ಹಾಗೂ ವಿವಿಧಪರ ಸಂಘಟನೆಗಳ ಮುಖಂಡರು ಹಾಗೂ ಸಮಾಜ ಸೇವ ಕಾರ್ಯಕರ್ತರು ಆಗಮಿಸಿ , ಗುರುವಿನ ಕೃಪೆಗೆ ಪಾತ್ರರಾಗಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ವಿಜ್ಞಾನ ಕಾಲೇಜುಗಳನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದ ಲಕ್ಷಾಂತರ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಹಾಗೂ ತಾಂತ್ರಿಕ ಪದವಿ ಪಡೆಯುವ ದಿಕ್ಕಿನಲ್ಲಿ ಗುರುಗಳ ಮಾರ್ಗದರ್ಶನವು ಅದ್ಭುತವಾಗಿದೆ ನಮಗೆ ದಾರಿ ತೋರಿ ಕೈಹಿಡಿದು ಮುನ್ನಡೆಸಿದ ಗುರುವನ್ನು ಭಕ್ತಿಯಿಂದ ಸ್ಮರಣೆ ಮಾಡಿ ಗುರುಗಳ ಕೃಪೆಗೆ ಪಾತ್ರರಾಗುತ್ತಿರುವ ನಾವೇ ಧನ್ಯರಾಗಿದ್ದೇವೆ ಎಂದು ರಾಮಕೃಷ್ಣೇಗೌಡ ಅಭಿಮಾನದಿಂದ ಹೇಳಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ನಾಯಕನಹಳ್ಳಿ ಬಿ.ನಂಜಪ್ಪ, ಸಮಾಜ ಸೇವಕರಾದ ಬ್ಯಾಲದ ಕೆರೆ ಪಾಪೇಗೌಡ ವಕೀಲರಾದ ಶೀಳನೆರೆ ಎಸ್‌.ಸಿ.ವಿಜಯ್ ಕುಮಾರ್, ಸಮಾಜ ಸೇವಕ ಹಾಗೂ ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ, ವಕೀಲ ಚಟ್ಟಂಗೆರೆ ಬಿ.ನಾಗೇಶ್ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಹರಿಚರಣತಿಲಕ್, ಕೆ.ಆರ್. ನೀಲಕಂಠ, ಪತ್ರಕರ್ತರಾದ ವಿ. ಲೋಕೇಶ್, ರಾಜು, ಕಾಡು ಮೆಣಸ ಚಂದ್ರು, ಸೈಯದ್ ಕಲೀಲ್, ಶ್ಯಾರಹಳ್ಳಿ ಗೋವಿಂದರಾಜು, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾಟಕ ಹಳ್ಳಿ ಗಂಗಾಧರ, ಹೊಸ ಹೊಳಲು ಶ್ರೀನಿವಾಸ ಮೂರ್ತಿ ಸೇರಿದಂತೆ ಬಿಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪ್ರಸಾದೇಗೌಡ, ಮುಖ್ಯ ಶಿಕ್ಷಕರಾದ ರಾಮಚಂದ್ರ, ಜಾನಪದ ಕಲಾವಿದ ದೊಡ್ಡ ಕ್ಯಾತನಹಳ್ಳಿ ಶಂಕರ್, ರೈತ ಮುಖಂಡ ಮರವನಹಳ್ಳಿ ಶಂಕರ್ ಸೇರಿದಂತೆ ನೂರಾರು ಜನರು ಹಾಗೂ ವಿದ್ಯಾರ್ಥಿಗಳು ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದ್ಗುರುವಿನ ಕೃಪೆಗೆ ಪಾತ್ರರಾದರು.


ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

Leave a Reply

Your email address will not be published. Required fields are marked *