ಕೊಪ್ಪಳ: ಎಕ್ಸ್ ಇಂಡಿಯಾ ಕಾರ್ಖಾನೆ ಮಾಲೀಕರು ಪುರಾತನ ಹಾಗೂ ನೂರಾರು ವರ್ಷ ಇತಿಹಾಸ ಇರುವ ಮೂಗು ಬಸವೇಶ್ವರ ದೇವಸ್ಥಾನ ಸ್ಥಳಾಂತರ ಮಾಡುವುದು ಸರಿಯಲ್ಲ ಎಂದು ಗ್ರಾಮಸ್ಥ ಟಿಕ್ಯಾನಾಯಕ್ ಬೇಸರ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಕುಣಿಕೇರಿ ತಾಂಡ ಗ್ರಾಮದ ಬಳಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕುಣಿಕೇರಿ ತಾಂಡ ಗ್ರಾಮದ ನಿವಾಸಿ ಟಿಕ್ಯಾನಾಯಕ್ ಮಾತನಾಡಿ, ಗ್ರಾಮದ ಬಳಿ ಎಕ್ಸ್ ಇಂಡಿಯಾ ಕಾರ್ಖಾನೆಗೆ ರೈತರು ಭೂಮಿ ಕೊಟ್ಟಿದ್ದಾರೆ. ಕಾರ್ಖಾನೆಯವರು ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಿದ್ದಾರೆ. ಅಲ್ಲಿ ನೂರಾರು ಇತಿಹಾಸ ಇರುವ ಮೂಗು ಬಸವೇಶ್ವರ ದೇವಸ್ಥಾನ ಇದೆ. ಅಮ್ಮ ತಾತ ನಮ್ಮ ಅಪ್ಪ ಕಾಲದಿಂದಲೂ ಪ್ರತಿ ವರ್ಷವೂ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಾಲ್ಕನೇ ಸೋಮವಾರ ದಿನ ದೇವರಿಗೆ ವಿಶೇಷ ಪೂಜೆ ಹಾಗೂ ಜಾತ್ರೆ ಮಾಡಲಾಗುತ್ತಿದೆ. ಆ ದಿನ ಗ್ರಾಮದ ಎಲ್ಲಾ ರೈತರು ಹಾಗೂ ಗ್ರಾಮದ ಎಲ್ಲಾ ಸಾರ್ವಜನಿಕರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಹಾಗೂ ಜಾತ್ರೆಯಲ್ಲಿ ಪಾಲ್ಗೊಂಡು ಆಚರಣೆ ಮಾಡುತ್ತಾ ಬಂದಿದ್ದೇವೆ. ಆರ್ಥಿಕ ಸಂಕಷ್ಟದಿಂದ ಭೂಮಿ ಮಾರಾಟ ಮಾಡಿರಬಹುದು ದೇವಸ್ಥಾನ ಮಾರಾಟ ಮಾಡಿರುವುದಿಲ್ಲ, ಕಾರ್ಖಾನೆ ಮಾಲೀಕರು ದೇವಸ್ಥಾನ ಸ್ಥಳಾಂತರ ಮಾಡಿ ನೂತನ ದೇವಸ್ಥಾನ ನಿರ್ಮಾಣ ಮಾಡುತ್ತೇವೆ ಎಂದು ಹೇಳುತ್ತಾರೆ.

ಸ್ಥಳಾಂತರ ಮಾಡುವ ಜಾಗದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ಇದೆ. ಅಂತಹ ಜಾಗದಲ್ಲಿ ಇತಿಹಾಸ ಹಾಗೂ ನೂರಾರು ವರ್ಷದ ದೇವಸ್ಥಾನ ಸ್ಥಳಾಂತರ ಮಾಡುವುದು ಸರಿಯಾದ ಕ್ರಮವಲ್ಲ. ಧಾರ್ಮಿಕ ದತ್ತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಆಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಜೊತೆಗೆ ಅದೇ ಜಾಗದಲ್ಲೇ ನೂತನ ದೇವಸ್ಥಾನವನ್ನ ನಿರ್ಮಾಣ ಮಾಡಿ ಪೂಜೆ ಮಾಡಲು ಗ್ರಾಮಸ್ಥರಿಗೆ ಭಕ್ತರಿಗೆ ಅವಕಾಶ ಕಲ್ಪಿಸಬೇಕು ಇಲ್ಲವಾದರೆ ಪ್ರತಿಭಟನೆ ಮಾಡಿ ನ್ಯಾಯಾಲಯದ ಮೊರೆ ಹೋಗಲಾಗುವುದು. ಕಾರ್ಖಾನೆ ಮಾಲೀಕರು ಅದಕ್ಕೆ ಅವಕಾಶ ಕೊಡದೆ ದೇವಸ್ಥಾನವನ್ನ ಸ್ಥಳಾಂತರ ಮಾಡಬಾರದು ಎಂದು ಮನವಿ ಮಾಡಿದರು.