
ಗವಿಸಿದ್ದಪ್ಪ ನಾಯಕ ಕೊಲೆ : ಆ.11ರಂದು ವಾಲ್ಮೀಕಿ ಸಮಾಜದಿಂದ ಬೃಹತ್ ಪ್ರತಿಭಟನೆ
ಕೊಪ್ಪಳ: ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣ ಖಂಡಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಪಟಕ ಆ.11ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಜಾತಿ, ಪಕ್ಷ ಭೇದ ತೊರೆದು ಎಲ್ಲರೂ ಭಾಗಿಯಾಗಿ ಬೆಂಬಲಿಸುವಂತೆ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಕೆ.ಎನ್. ಪಾಟೀಲ್ ಮನವಿ ಮಾಡಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಇದೊಂದು ವ್ಯವಸ್ಥಿತ ಕೊಲೆ, ಪ್ರಕರಣದ ಹಿಂದೆ ಯಾರೇ ಇರಲಿ.
ಅವರಿಗೆ ಶಿಕ್ಷೆಯಾಗಬೇಕೆಂಬುದು ನಮ್ಮ ಒತ್ತಾಯ. ಹೀಗಾಗಿ ಆ.11ರಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಯಾವುದೇ ಪಕ್ಷ, ಜಾತಿ, ಸಂಘಟನೆ ಇರಲಿ. ಎಲ್ಲರೂ ನ್ಯಾಯಕ್ಕಾಗಿ ನಮ್ಮೊಡನೆ ಕೈ ಜೋಡಿಸಿ, ಪಕ್ಷ, ಸಂಘಟನೆ ಬ್ಯಾನರ್ ಬೇಡ, ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಬೇಕು. ಗಡಿಯಾರಕಂಬ ವೃತ್ತದಿಂದ ಅಶೋಕ ವೃತ್ತವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಸಾವಿರಾರು ಜನರು ಭಾಗಿಯಾಗುವರೆಂದು ಮಾಹಿತಿ ನೀಡಿದರು. ಗವಿಸಿದ್ದಪ್ಪ ನಾಯಕ ತಂದೆ ನಿಂಗಜ್ಜ ಮಾತನಾಡಿ, ಬಾನು ಎಂಬ ಹುಡುಗಿಯಿಂದಲೇ ಕೊಲೆ ಆಗಿರುವುದು. ನಾವು ಎಷ್ಟು ತಿಳಿಸಿ ಹೇಳಿದರೂ ಕೇಳಿಲ್ಲ. ಕೊಲೆ ಆದ ದಿನ 19 ಬಾರಿ ನನ್ನ ಮಗನಿಗೆ ಕರೆ ಮಾಡಿದ್ದಾಳೆ.
. ಆಕೆಗೂ ಶಿಕ್ಷೆಯಾಗಬೇಕು. ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು. ಪ್ರತಿಭಟನೆಗೆ ನಮ್ಮ ಕುಟುಂಬದ ಬೆಂಬಲ ಇದೆ ಎಂದರು.ವಾಲ್ಮೀಕಿ ನಾಯಕ ಸಮುದಾಯ ಪ್ರಮುಖರಾದ ಸುರೇಶ ಡೊಣ್ಣಿ, ಶರಣಪ್ಪ ನಾಯಕ, ನಾಗರಾಜ ಬಿಲ್ಗಾರ, ನಿಂಗಪ್ಪ ನಾಯಕ, ರವಿಕುಮಾರ ಬನ್ನಿಕೊಪ್ಪ, ಶಾಂತಪ್ಪ ಪೂಜಾರ, ನಿಂಗಜ್ಜ ದದೇಗಲ್, ಡಾ.ಗೀತಾ ಮುತ್ತಾಳ, ಗವಿಸಿದ್ದಪ್ಪ ನಾಯಕ ಕುಟುಂಬದವರು ಇದ್ದರು.

