
ಗ್ರಾಮದ ಸ್ವಚ್ಛತೆಗೆ ಗ್ರಾಪಂ ಜೊತೆ ಕೈಜೋಡಿಸುವಂತೆ ಇಒ ಚಂದ್ರಶೇಖರ ಕಂದಕೂರ.

ಮಾರನಬಸರಿ ಗ್ರಾಮಸ್ಥರಿಗೆ ಕರೆಗ್ರಾಮದ ಮನೆಗಳಿಗೆ, ಹೋಟೆಲ್ ಮತ್ತು ದಿನಸಿ ಅಂಗಡಿಗೆ ತೆರಳಿ ಕಸ ವಿಲೇವಾರಿ ಕುರಿತು ಜಾಗೃತಿ ಮೂಡಿಸಿದ ಇಒ ಚಂದ್ರಶೇಖರ
ಗಜೇಂದ್ರಗಡ:೦೭/೦೮/೨೦೨೫: ಗ್ರಾಮೀಣ ಪ್ರದೇಶಗಳು ಶುಚಿತ್ವದಿಂದ ಕೂಡಿದ್ದರೆ ಗ್ರಾಮದಲ್ಲಿ ಯಾವುದೇ ಸಾಂಕ್ರಾಮಿಕ ರೋಗ ಹರಡಲು ಸಾಧ್ಯವಾಗದು. ಗ್ರಾಮಕ್ಕೆ ರೋಗದ ಆಹ್ವಾನ ನೀಡುವವರು ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಕುತ್ತಾರೆ.

ಗ್ರಾಮಕ್ಕೆ ಯಾವುದೇ ರೋಗ ಬರಬಾರದು ಎನ್ನುವವರು ಗ್ರಾಪಂ ನೀಡುವ ಮಾರ್ಗದರ್ಶನದಂತೆ ಕಸ ವಿಲೇವಾರಿ ಮಾಡಿ ತಮ್ಮ ಗ್ರಾಮವನ್ನು ಸ್ವಚ್ಛಂದವಾಗಿಟ್ಟುಕೊಳ್ತಾರೆ. ಇಡೀ ಗ್ರಾಮವೇ ಸ್ವಚ್ಛತೆಯಿಂದ ಕೂಡಿದ್ದರೆ ಗ್ರಾಮದ ಮಕ್ಕಳ ಭವಿಷ್ಯವು ಉಜ್ವಲವಾಗಿರುತ್ತದೆ. ಹೀಗೆ ಗ್ರಾಮೀಣ ಭಾಷೆಯ ಸೊಗಡಿನಲ್ಲೇ ತಾಲೂಕಿನ ಮಾರನಬಸರಿ ಗ್ರಾಮದಲ್ಲಿ ಕಸ ವಿಲೇವಾರಿ ಬಗ್ಗೆ ಗ್ರಾಮಸ್ಥರಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ, ಕಂದಕೂರು ಜಾಗೃತಿ ಮೂಡಿಸಿದ ವಿನೂತನ ಪ್ರಯತ್ನ ನೆರೆದ ಸಾರ್ವಜನಿಕರಲ್ಲಿ ಮತ್ತು ಗ್ರಾಮಸ್ಥರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿತು.ಗುರುವಾರ ಬೆಳಂಬೆಳಿಗ್ಗೆ ಮಾರನಬಸರಿ ಗ್ರಾಮ ಪಂಚಾಯತ ಅಧ್ಯಕ್ಷ ವೀರಣ್ಣ ಮರಡಿ ಮತ್ತು ಸಹಾಯಕ ನಿರ್ದೇಶಕರು ಉದ್ಯೋಗ ಖಾತರಿ ಬಸವರಾಜ ಬಡಿಗೇರ ಹಾಗೂ ಪಿಡಿಒ ಎಸ್.ಆರ್.ಸಂಕನೂರ ಅವರ ಜೊತೆಗೂಡಿ ಮಾರನಬಸರಿ ಗ್ರಾಮದ ಹಳೆ ಪಂಚಾಯತ ಆವರಣ, ಬಸವೇಶ್ವರ ಓಣಿ, ಸಂಗೊಳ್ಳಿರಾಯಣ್ಣ ವೃತ್ತ ಹಾಗೂ ಬಸ್ ನಿಲ್ದಾಣದ ಸುತ್ತಮುತ್ತಲಿನ ಮನೆಗಳಿಗೆ ತೆರಳಿ ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸಿದರು.
ಮನೆಯಲ್ಲಿ ಬಳಸಿ ಬೇಡವಾದ ಕಸವನ್ನು ಒಣ ಕಸ ಮತ್ತು ಹಸಿ ಕಸ ಎಂದು ಬೇರ್ಪಡಿಸಿ. ಒಣ ಕಸ ಮತ್ತು ಹಸಿ ಕಸ ಸಂಗ್ರಹಕ್ಕೆ ಗ್ರಾಪಂ ಅವರು ಪ್ರತ್ಯೇಕವಾಗಿ ಕಸದಬುಟ್ಟಿ ನೀಡಿದ್ದಾರೆ. ಕಸದಬುಟ್ಟಿಯಲ್ಲೇ ಕಸ ಸಂಗ್ರಹಿಸಿ ಕಸದ ವಾಹಿನಿ ಬಂದಾಗ ಸ್ವಚ್ಛತೆಗಾರರ ಮೂಲಕ ಕಸದವಾಹಿನಿಗೆ ಕಸ ಹಾಕಿ. ಮನೆ-ಗ್ರಾಮ ಕಸ ಮುಕ್ತವಾದರೆ ಗ್ರಾಮದ ವಾತಾವರಣ ಆರೋಗ್ಯಯುತವಾಗುತ್ತದೆ.

ಬಾಕ್ಸ್:ಮಹಿಳಾ ಸಬಲೀಕರಣಕ್ಕೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸ್ವಚ್ಛ ಭಾರತ್ ಮಿಶನ್ ಅಡಿ ಕಸ ವಿಲೇವಾರಿ ವಾಹನಕ್ಕೆ ಮಹಿಳಾ ಡ್ರೈವರಗಳನ್ನೇ ನೇಮಕ ಮಾಡಲಾಗಿದೆ. ಮಾರನಬಸರಿ ಕಸದ ವಾಹಿನಿ ಡ್ರೈವರ್ ಗೀತಾ ಹಾದಿಮನಿ ಅವರ ಜೊತೆ ಇಒ ಚಂದ್ರಶೇಖರ ಕಂದಕೂರ ಸಮಾಲೋಚನೆ ನಡೆಸಿ ಪ್ರಾಮಾಣಿಕವಾಗಿ ತಮ್ಮ ಕೆಲಸವನ್ನು ನಿರ್ವಹಿಸುವಂತೆ ಸೂಚಿಸಿದರು. ನಿಮ್ಮ ಗ್ರಾಮಕ್ಕೆ ನೀವೇ ಸ್ವಚ್ಛತೆಯ ರಾಯಭಾರಿಗಳು, ಸ್ವಚ್ಛತೆ ಕುರಿತು ಗ್ರಾಮಸ್ಥರಿಗೆ ನೀವೇ ಮೊದಲ ಗುರುವಾಗಬೇಕು ಅಂತ ಅವರ ಕಾರ್ಯವನ್ನು ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ಮಾರನಬಸರಿ ಗ್ರಾಮ ಪಂಚಾಯತಿಯ ಮಂಜುಳಾ ಹಾದಿಮನಿ ಉಪಾಧ್ಯಕ್ಷರು, ಸದಸ್ಯರಾದ ಶಿವಕುಮಾರ ದಿಂಡೂರು, ಅಲ್ಲಾಸಾಬ ಬೋತೇಖಾನ್, ವೀರಪ್ಪ ನಿಡಗುಂದಿ, ದಿಲ್ಷಾದ್ ದೋಟಿಹಾಳ್, ಪಾತೀಮಾ ಸವಡಿ, ಹನಮ್ಮಪ್ಪ ತಳವಾರ ಮತ್ತು ಗ್ರಾಪಂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
