
ಭಾರತ ಸರ್ಕಾರದ ವಾರ್ತಾ ಶಾಖೆ ಬೆಂಗಳೂರು ವತಿಯಿಂದ ಯಾದಗಿರಿಯಲ್ಲಿ ವಾರ್ತಾಲಾಪ ಆಯೋಜನೆ
ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರಿಂದ ಕಾರ್ಯಾಗಾರ ಉದ್ಘಾಟನೆಕಟ್ಟಕಡೆಯ ಫಲಾನುಭವಿಗೆ ಸರ್ಕಾರದ ಯೋಜನೆಗಳು ತಲುಪಬೇಕು: ಶಾಸಕ ಶ್ರೀ ಚನ್ನಾರೆಡ್ಡಿ ಕೇಂದ್ರ ಪುರಸ್ಕೃತ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಮಾಧ್ಯಮಗಳ ಪಾತ್ರ ಹಿರಿದು: ಪಿಐಬಿ ಬೆಂಗಳೂರು ಹೆಚ್ಚುವರಿ ಮಹಾನಿರ್ದೇಶಕರಾದ ಶ್ರೀ ಎಸ್.ಜಿ. ರವೀಂದ್ರಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಕುರಿತು ಯಾದಗಿರಿ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗೆ ಕಾರ್ಯಾಗಾರಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ಬೆಂಗಳೂರು ಹಾಗೂ ಯಾದಗಿರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ)., ಕರ್ನಾಟಕ ಕಾರ್ಯನಿರತ ಪತ್ರಿಕೆಗಳ ಸಂಪಾದಕರ ಸಂಘ (ರಿ). ಜಿಲ್ಲಾ ಘಟಕ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಇಂದು ಯಾದಗಿರಿಯ ಎಸ್ ಡಿ ಎನ್ ಹೋಟೆಲ್ ನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಆಯೋಜಿಸಿದ್ದ “ವಾರ್ತಾಲಾಪ” ಕಾರ್ಯಾಗಾರವನ್ನು ಯಾದಗಿರಿ ಕ್ಷೇತ್ರದ ಶಾಸಕ ಶ್ರೀ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಉದ್ಘಾಟಿಸಿದರು.
ಈ ವೇಳೆ ಶಾಸಕರಾದ ಶ್ರೀ ಚನ್ನಾರೆಡ್ಡಿ ಅವರು ಮಾತನಾಡಿ, ಪತ್ರಕರ್ತರಿಗೆ ಈ ಕಾರ್ಯಾಗಾರ ಆಯೋಜಿಸಿರುವುದು ಬಹಳ ಸಂತೋಷದ ಸಂಗತಿ. ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಹಳ್ಳಿ ಹಳ್ಳಿಗೆ ಮುಟ್ಟಿಸುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರದ ವಾರ್ತಾ ಶಾಖೆ ಹಮ್ಮಿಕೊಂಡಿರುವ ವಾರ್ತಾಲಾಪ ಕಾರ್ಯಾಗಾರವು ಬಹಳ ಅನುಕೂಲಕರವಾಗಲಿದೆ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಹೆಚ್ಚು ಪ್ರಚುರಪಡಿಸುವುದರಿಂದ ಎಲ್ಲ ಫಲಾನುಭವಿಗಳಿಗೂ ಸರ್ಕಾರದ ಯೋಜನೆಗಳು ತಲುಪಲಿವೆ ಎಂದು ತಿಳಿಸಿದರು. ಬಹುತೇಕ ಹಳ್ಳಿಗಳಲ್ಲಿ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ.
ಇದರಿಂದ ಜನರಿಗೆ, ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಬಹಳ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ಇದು ಸರ್ಕಾರದ ಒಂದು ಅತ್ಯುತ್ತಮ ಕಾರ್ಯವಾಗಿದೆ. ಇದೇ ರೀತಿ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹಲವು ಅಭಿವೃದ್ಧಿ ಕಾರ್ಯಗಳು ಹೆಚ್ಚಾಗಲಿ ಎಂದು ಆಶಿಸಿದರು.ಭಾರತ ಸರ್ಕಾರದ ವಾರ್ತಾ ಶಾಖೆಯ, ಬೆಂಗಳೂರಿನ ಹೆಚ್ಚುವರಿ ಮಹಾನಿರ್ದೇಶಕರಾದ ಶ್ರೀ ಎಸ್.ಜಿ. ರವೀಂದ್ರ ಅವರು ಕಾರ್ಯಾಗಾರದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳು ರಾಜ್ಯ ಸರ್ಕಾರದ ಮೂಲಕವೇ ಅನುಷ್ಠಾನವಾಗುತ್ತವೆ. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದಾಗಿ ಕೆಲಸ ಮಾಡಿದಾಗ ಮಾತ್ರ ಯೋಜನೆಗಳ ಸಮರ್ಪಕ ಅನುಷ್ಠಾನ ಕಾಣಬಹುದು. ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾದ ಡಾ.ಎಲ್. ಮುರುಗನ್ ಅವರು ಲೋಕಸಭೆಯಲ್ಲಿ ಮಾಹಿತಿ ನೀಡಿದಂತೆ, ಗ್ರಾಮೀಣ ಪ್ರದೇಶಗಳಲ್ಲಿ 104ರಿಂದ 510 ಸಮುದಾಯ ವಾಹಿನಿಗಳನ್ನು ಹೆಚ್ಚಿಸಲಾಗಿದೆ. ಹೊಸದಾಗಿ 264 ಸಮುದಾಯ ಬಾನುಲಿ ಕೇಂದ್ರಗಳು, 6 ದೂರದರ್ಶನ ವಾಹಿನಿಗಳಿಗೆ ಅನುಮೋದನೆ ನೀಡಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ, ಆರೋಗ್ಯ ವಲಯದಲ್ಲಿ ಆಯುಷ್ಮಾನ್ ಭಾರತ, ಜನೌಷಧಿ ಕೇಂದ್ರಗಳು, ಸರ್ಕಾರದ ಎಲ್ಲ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸುವ ಉಮಂಗ್ ಅಪ್ಲಿಕೇಷನ್ ಸೇರಿದಂತೆ ವಿಶೇಷವಾಗಿ ರೈತರಿಗೆ, ಯುವಕರಿಗೆ, ಮಕ್ಕಳಿಗೆ, ಮಹಿಳೆಯರಿಗೆ, ಆರೋಗ್ಯ, ವಸತಿ ಕ್ಷೇತ್ರಗಳಲ್ಲಿ ಜನಪ್ರಿಯ ಯೋಜನೆ ಹಾಗೂ ಉಪಕ್ರಮಗಳು ಅನುಷ್ಠಾನಗೊಂಡಿವೆ. ಇವುಗಳಿಗೆ ಮಾಧ್ಯಮದವರು ಇನ್ನೂ ಹೆಚ್ಚಿನ ಪ್ರಚಾರ ಒದಗಿಸಿದರೆ, ಜನರು ಅವುಗಳ ಮಾಹಿತಿ ಪಡೆದು, ಅದರ ಅನುಕೂಲ ಪಡೆಯುತ್ತಾರೆ ಎಂದು ಹೇಳಿದರು.

ಯಾದಗಿರಿ ಜಿಲ್ಲಾಧಿಕಾರಿ ಶ್ರೀ ಹರ್ಷಲ್ ಭೋಯರ್ ಅವರು ಮಾತನಾಡಿ, ಮಹತ್ವಾಕಾಂಕ್ಷಿ ಜಿಲ್ಲೆಗಳ ಪಟ್ಟಿಯಲ್ಲಿ ಯಾದಗಿರಿ ಇದೆ. ಇದು ಕೃಷಿಯಾಧಾರಿತ ಜಿಲ್ಲೆಯಾಗಿದ್ದು, ಇಲ್ಲಿನ ಸುಸ್ಥಿರ ಕೃಷಿ, ತೋಟಗಾರಿಕೆ, ನೀರಾವರಿ ಯೋಜನೆಗಳ ಅನುಷ್ಠಾನ ಕುರಿತು ಈ ಕಾರ್ಯಾಗಾರದಲ್ಲಿ ಸಮಗ್ರ ಮಾಹಿತಿ ದೊರಕಲಿದೆ. ಈ ಕಾರ್ಯಾಗಾರ ಮಹತ್ವದಾಗಿದೆ. ಇದರ ಜೊತೆಗೆ ಉದ್ಯೋಗಾವಕಾಶ, ಜೀವ ವಿಮೆ, ಶಿಕ್ಷಣ, ಆರೋಗ್ಯ, ಯುವ ಸಬಲೀಕರಣ ಮುಂತಾದ ಕ್ಷೇತ್ರಗಳ ಜನಪರ ಯೋಜನೆಗಳ ಮಾಹಿತಿಗಳನ್ನು ಪತ್ರಕರ್ತರು ತಿಳಿದುಕೊಂಡು ಅದನ್ನು ಜನರಿಗೆ ಮುಟ್ಟಿಸುವುದು ಅಗತ್ಯ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಪೃಥ್ವಿಕ್ ಶಂಕರ್ ಅವರು ಮಾತನಾಡಿ, ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಪರಿಗಣಿಸಲಾಗುತ್ತದೆ. ಮಾಧ್ಯಮದವರು ಮಾಹಿತಿ ಹಂಚಿಕೊಳ್ಳುವುದರ ಜೊತೆಗೆ ಅದರಲ್ಲಿರುವ ಸತ್ಯಪರತೆಗೂ ಒತ್ತು ನೀಡಬೇಕು. ಈಗಿನ ಕಾಲಕ್ಕೆ ಜವಾಬ್ದಾರಿಯ ವರದಿಗಾರಿಕೆ ಹೆಚ್ಚು ಅವಶ್ಯವಾಗಿದೆ.

ಸಮಾಜದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ತಡೆಯಲು ಪೊಲೀಸ್ ಇಲಾಖೆ ಸಹಾಯವಾಣಿಯನ್ನು ಜಾರಿಗೊಳಿಸಿದೆ. ಅದಕ್ಕೆ ಹೆಚ್ಚಿನ ಪ್ರಚಾರ ನೀಡಬೇಕು ಎಂದು ಹೇಳಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ಮಲ್ಲಪ್ಪ ಸಂಕೀನ್ ಅವರು ಮಾತನಾಡಿ, ಸರ್ಕಾರದ ಅನೇಕ ಯೋಜನೆಗಳು ಮೊದಲು ಮಾಧ್ಯಮದವರಿಗೆ ತಿಳಿಯಬೇಕು. ಆಗ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸಲು ಅನುಕೂಲವಾಗುತ್ತದೆ. ಪತ್ರಕರ್ತರಲ್ಲಿ ಅಧ್ಯಯನ ಆಧಾರಿತ ಲೇಖನಗಳು ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಯಾದಗಿರಿ ನಗರಸಭೆ ಅಧ್ಯಕ್ಷರಾದ ಕು. ಲಲಿತಾ ಅನಪೂರ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಲವೀಶ್ ಒರಡಿಯಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬೂರಾವ್ ಕಾಡ್ಲೂರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ಸುಲೈಮಾನ್ ಡಿ. ನದಾಫ್, ಕರ್ನಾಟಕ ಕಾರ್ಯನಿರತ ಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಸಿದ್ದಪ್ಪ ಲಿಂಗೇರಿ ಅವರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಯಾದಗಿರಿ ಜಿಲ್ಲೆಯ ನೂರಕ್ಕೂ ಅಧಿಕ ಮಾಧ್ಯಮ ಪ್ರತಿನಿಧಿಗಳು ಭಾಗಿಯಾಗಿದ್ದು ವಿಶೇಷವಾಗಿತ್ತು.

