ಮಹಿಳಾ ಸ್ವಸಹಾಯ ಗುಂಪುಗಳ ಆರ್ಥಿಕ ಬಲವರ್ಧನೆಗೆ ಮತ್ಸ್ಯ ಸಂಜೀವಿನಿ ಯೋಜನೆ ಸಹಕಾರಿ- ಸಿಇಓ ವರ್ಣಿತ್ ನೇಗಿ

ಮಹಿಳಾ ಸ್ವಸಹಾಯ ಗುಂಪುಗಳ ಆರ್ಥಿಕ ಬಲವರ್ಧನೆಗೆ ಮತ್ಸ್ಯ ಸಂಜೀವಿನಿ ಯೋಜನೆ ಸಹಕಾರಿ- ಸಿಇಓ ವರ್ಣಿತ್ ನೇಗಿ——

ಕೊಪ್ಪಳ ಜುಲೈ 25 (ಕರ್ನಾಟಕ ವಾರ್ತೆ): ಮೀನು ಕೃಷಿ ಕೈಗೊಳ್ಳಲು ಮತ್ಸ್ಯ ಸಂಜೀವಿನಿ ಯೋಜನೆಯು ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಆರ್ಥಿಕ ಬಲವರ್ಧನೆಗಾಗಿ ತುಂಬಾ ಸಹಕಾರಿಯಾಗಲಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಹೇಳಿದರು. ಅವರು ಶುಕ್ರವಾರ ಕೊಪ್ಪಳ ಜಿಲ್ಲಾ ಪಂಚಾಯತ್ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಜಿ.ಪಂ ಹಾಗೂ ಮೀನುಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಮತ್ಸ್ಯ ಸಂಜೀವಿನಿ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಮತ್ಸ್ಯಸಂಜೀವಿನಿ ಯೋಜನೆಯು ಕರ್ನಾಟಕದಲ್ಲಿ ಇದೊಂದು ಹೊಸ ಪ್ರಯೋಗವಾಗಿದ್ದು, ಈ ಯೋಜನೆಯಡಿಯಲ್ಲಿ ಕೆಲ ಜಿಲ್ಲೆಗಳಲ್ಲಿ ಹೆಚ್ಚು ಸಮಯದವರೆಗೆ ನೀರಿರುವಂತಹ ಕೆರೆಗಳಲ್ಲಿ ಈಗಾಗಲೇ ಕೈಗೊಂಡಿರುವ ಮೀನು ಕೃಷಿಯು ಯಶಸ್ವಿಯಾಗಿದೆ.

ಯೋಜನೆಯನ್ನು ಮೀನುಗಾರಿಕೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಎನ್.ಆರ್.ಎಲ್.ಎಂ. ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿರುವ ಕೆರೆಗಳಲ್ಲಿ ಮಳೆಗಾಲದ ನಂತರವೂ 6 ತಿಂಗಳುಗಳ ಕಾಲ ನೀರು ಸಂಗ್ರಹವಾಗಿರುವಂತಹ ಸುಮಾರು 15 ಕೆರೆಗಳನ್ನು ಗುರುತಿಸಿದ್ದು, ಅಂತಹ ಕೆರೆಗಳಲ್ಲಿ ಮತ್ಸ್ಯ ಸಂಜೀವಿನಿ ಯೋಜನೆಯಡಿ ಮೀನು ಕೃಷಿಯನ್ನು ಕೈಗೊಳ್ಳಲು ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಕೆರೆಗಳ ಗುತ್ತಿಗೆ ನೀಡಲು ಅವಕಾಶವಿದ್ದು, ಇದರಿಂದ ಗ್ರಾಮೀಣ ಭಾಗದಲ್ಲಿರುವ ಸ್ವಸಹಾಯ ಸಂಘದ ಗುಂಪಿನ ಸದಸ್ಯರಿಗೆ ಆರ್ಥಿಕವಾಗಿ ಸಬಲೀಕರಣವಾಗಲಿದೆ ಎಂದರು. ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಕೆರೆಗಳಲ್ಲಿ ಮೀನು ಮರಿಗಳನ್ನು ಬಿಟ್ಟು, ಅವುಗಳ ಪಾಲನೆ ಮತ್ತು ಮಾರಾಟ ಮಾಡಿ, ಯಾವ ರೀತಿ ಲಾಭಗಳಿಸಬೇಕೆಂಬ ಮಾಹಿತಿ ನೀಡಲು ಮೀನುಗಾರಿಕೆ ಇಲಾಖೆಯಿಂದ ಇಂದು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಮೀನುಗಾರಿಕೆಗೆ ಸರ್ಕಾರದ ವಿವಿಧ ಯೋಜನೆಗಳಡಿ ಸಾಲ, ಸಹಾಯಧನ ಮತ್ತು ಹಲವು ಸೌಲಭ್ಯಗಳಿದ್ದು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು.

ಇದರ ಜೊತೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದಲೂ ನಿಮಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿಜಯನಗರ ಜಿಲ್ಲೆಯ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಮಲ್ಲೇಶ ನಾಯಕ ಅವರು ಇಲಾಖೆ ಯೋಜನೆಗಳು ಹಾಗೂ ಸಾಲ ಸೌಲಭ್ಯಗಳ ಕುರಿತು ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ವಿವರವಾದ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಪ್ರಕಾಶ ವಿ., ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಕೊಪ್ಪಳ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಕುಲಕರ್ಣಿ, ಪಶು ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ.ಮಲ್ಲಯ್ಯ, ಕೊಪ್ಪಳ ಮೀನಿಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಪಾಟೀಲ್, ಗಂಗಾವತಿ ಆನಂದ ಪಾಟೀಲ್, ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತನ ಓಂಬುಡ್ಸ್ ಮನ್ ವೀರಣ್ಣ ಕಮ್ತಾರ, ಎನ್.ಆರ್.ಎಲ್.ಎಂ ಘಟಕದ ಅಂಬಣ್ಣ ಹಾಗೂ ಮೀನುಗಾರಿಕೆ ಇಲಾಖೆಯ ಇತರೆ ಅಧಿಕಾರಿ, ಸಿಬ್ಬಂದಿಗಳು ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *