
ಗದಗ (ಕರ್ನಾಟಕ ವಾರ್ತೆ) ಜುಲೈ 21: ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದಕ್ಕಾಗಿ ಹಾಗೂ ಅವರ ಶ್ರೇಯೋಭಿವೃದ್ಧಿಗಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.
ಅವುಗಳ ಅನುಷ್ಟಾನಕ್ಕಾಗಿ ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕೆಂದು ಕರ್ನಾಟಕ ರಾಜ್ಯದ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಜಿ ಪದ್ಮಾವತಿ ತಿಳಿಸಿದರು.ನಗರದ ಜಿಲ್ಲಾಡಳಿತ ಭವನದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಭವನದಲ್ಲಿ ಸೋಮವಾರ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಮಹಿಳಾ ಅಭಿವೃದ್ಧಿ ನಿಗಮದಿಂದ ಬಿಡುಗಡೆಯಾದ ಅನುದಾನದ ಸಮರ್ಪಕ ಬಳಕೆಯು ಅತೀ ಮುಖ್ಯವಾಗಿದೆ.
ಜಿಲ್ಲೆಯಲ್ಲಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ಬಿಪಿಎಲ್ ಕಾರ್ಡ ಹಾಗೂ ಉಚಿತ ಬಸ್ ಪ್ರಯಾಣ ಸೌಲಭ್ಯಗಳನ್ನು ಒದಗಿಸಿ ಅವರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕ್ರಮ ವಹಿಸಬೇಕು. ಕಿರುಸಾಲ ಮತ್ತು ನೇರ ಸಾಲ ಯೋಜನೆಯನ್ನು ಈಗ ಪುನರಾರಂಭಗೊಳಿಸಲಾಗುತ್ತಿದ್ದು ಅದರ ಸೌಲಭ್ಯ ಅರ್ಹರಿಗೆ ನಿಗದಿತ ಸಮಯದಲ್ಲೇ ದೊರಕುವಂತಾಗಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೆ ಆಧಾರ ಕಾರ್ಡ ಒದಗಿಸುವಲ್ಲಿ ವಿನಾಕಾರಣ ವಿಳಂಬವಾಗಬಾರದು ಎಂದು ನಿಗಮದ ಅಧ್ಯಕ್ಷೆ ಶ್ರೀಮತಿ ಜಿ ಪದ್ಮಾವತಿ ನಿರ್ದೇಶನ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಪದ್ಮಾವತಿ ಜಿ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 2970 ದಮನಿತ ಮಹಿಳೆಯರಿದ್ದಾರೆ. 2015-16 ರಿಂದ 2024-2025 ನೇ ಸಾಲಿನವರೆಗೆ 185 ಮಹಿಳೆಯರು ಚೇತನ ಯೋಜನೆಯ ಸೌಲಭ್ಯ ಪಡೆದಿದ್ದಾರೆ. ಜಿಲ್ಲೆಯಲ್ಲಿ 2970 ಎಚ್.ಐ.ವಿ. ಸೋಂಕಿತ ಮಹಿಳೆಯರಿದ್ದು ಆ ಪೈಕಿ 174 ಜನರು ಧನಶ್ರೀ ಯೋಜನೆಯ ಸೌಲಭ್ಯ ಪಡೆದಿರುತ್ತಾರೆ. 825 ಲಿಂಗತ್ವ ಅಲ್ಪಸಂಖ್ಯಾತರ ಪೈಕಿ 155 ಲಿಂಗತ್ವ ಅಲ್ಪಸಂಖ್ಯಾತರು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯ ಸೌಲಭ್ಯ ಪಡೆದಿರುತ್ತಾರೆ. 2018-19 ರಿಂದ 2024-2025 ನೇ ಸಾಲಿನವರೆಗೆ ಉದ್ಯೋಗಿನಿ ಯೋಜನೆಯಡಿ 194 ಮಹಿಳೆಯರು ಸೌಲಭ್ಯ ಪಡೆದಿದ್ದಾರೆ. ಪ್ರಸ್ತುತ 73 ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಚೀಟಿನೀಡಲಾಗಿದೆ ಎಂದು ಸಭೆಗೆ ವಿವರಿಸಿದರು.ಸಭೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಚೇತನ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಚೀಟಿ, ಆರೋಗ್ಯ ತಪಾಸಣಾ ಕಾರ್ಯಕ್ರಮ, ಕಿರು ಸಾಲ ಯೋಜನೆ, ಉದ್ಯೋಗಿನಿ ಯೋಜನೆ, ಧನಶ್ರೀ ಯೋಜನೆ ಪ್ರಗತಿ ಪರಿಶೀಲನೆ ನಡೆಸಲಾಯಿತು

.ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾದಿಕಾರಿ ಶ್ರೀಮತಿ ರಾಧಾ ಮಣ್ಣೂರ, ಮಹಿಳಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರಾದ ಅಕ್ಕಮಹಾದೇವಿ, ಜಿಲ್ಲಾ ಸ್ತಿçà ಶಕ್ತಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪುಷ್ಪಾ, ಎಲ್ಲ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸೃಷ್ಟಿ ಸಂಕುಲ ಸಂಸ್ಥೆಯ ಹಾಗೂ ಜಿಲ್ಲಾ ರಕ್ಷಣೆ ಮಹಿಳಾ ಒಕ್ಕೂಟದ ಮುಖ್ಯಸ್ಥರು, ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರು ಸೇರಿದಂತೆ ಇತರರು ಹಾಜರಿದ್ದರು.