
ಕಾರಟಗಿ: ತಾಲೂಕಿನ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ ನೈಜ ಪ್ರತ್ಯಕ್ಷ ಮಾದರಿಯಲ್ಲೇ ನಡೆದ ಶಾಲಾ ಸಂಸತ್ 2025-26ನೇ ಸಾಲಿನ (ಶಾಲಾ ಮಕ್ಕಳ ಆಡಳಿತ ಮಂಡಳಿಯ) ಚುನಾವಣೆಯನ್ನು ಕಾರಟಗಿ ತಾಲೂಕಿನ ತಹಸೀಲ್ದಾರ್ ಎಂ. ಕುಮಾರ ಸ್ವಾಮಿ ಹಾಗೂ ಶಾಲಾ ಆಡಳಿತ ಮಂಡಳಿಯ ಸಂಸ್ಥಾಪಕ ಅಧ್ಯಕ್ಷರಾದ ಲೀಲಾ ಮಲ್ಲಿಕಾರ್ಜುನ್, ಸಂಸ್ಥಾಪಕ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಬಿಚ್ಚಗಲ್ ಉದ್ಘಾಟಿಸಿ ಚಾಲನೆ ನೀಡಿದರು.

ನಂತರ ತಹಸಿಲ್ದಾರ್ ಎಂ ಕುಮಾರಸ್ವಾಮಿ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರತ್ಯಕ್ಷ ಪ್ರಜಾಪ್ರಭುತ್ವ ಹಾಗೂ ಪರೋಕ್ಷ ಪ್ರಜಾಪ್ರಭುತ್ವ ಎಂದರೇನು ಮತ್ತು ಚುನಾವಣೆಯಲ್ಲಿ ನಮ್ಮ ಭಾರತ ದೇಶ ಹೇಗೆ ವಿಭಿನ್ನವಾಗಿದೆ ಮತ್ತು ನಮ್ಮ ದೇಶದಲ್ಲಿ ಹೇಗೆ ಚುನಾವಣೆಗಳು ನಡೆಯುತ್ತವೆ ಎಂಬುದನ್ನು ತಿಳಿಸಿ,

ಇದರೊಂದಿಗೆ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗಾಗಿ ಹೇಗೆ ಅಧ್ಯಯನಶೀಲರಾಗಬೇಕು ಹಾಗೂ ಭಾರತವನ್ನು ಹೇಗೆ ಮುನ್ನಡೆಸಬೇಕು ಎನ್ನುವುದರ ಕುರಿತು ಸಮಗ್ರ ಮಾಹಿತಿ ನೀಡಿದರು

. ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಲೀಲಾ ಮಲ್ಲಿಕಾರ್ಜುನ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾರತದ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಬಗ್ಗೆ ಮಾಹಿತಿ ನೀಡಿದರು .

ಜೊತೆಗೆ ಸ್ಥಳೀಯ ಸರ್ಕಾರಗಳಾದ ಗ್ರಾಮ ಪಂಚಾಯಿತಿ, ಪುರಸಭೆ ಸದಸ್ಯರ ಬಗ್ಗೆ ಮತ್ತು ಅವರಿಗೆ ಕ್ಷೇತ್ರ ಅಭಿವೃದ್ಧಿಗೆ ದೊರಕುವ ಅನುದಾನದ ಬಗ್ಗೆ ಮಾಹಿತಿ ಸಂಗ್ರಹಿಸಿ ಒಂದು ಯೋಜನಾ ಕಾರ್ಯ ಸಿದ್ಧಪಡಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ವ್ಯಕ್ತಿಗಳಿಗೆ ನಿಮ್ಮ ಮತ ಹಾಕುವ ಮೂಲಕ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಿದಾಗ ಮಾತ್ರ ಈ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಶಾಲಾ ಸಂಸತ್ ಚುನಾವಣೆಯಲ್ಲಿ ಪ್ರಾಚಾರ್ಯರಾದ ವಿ ಟಿ ಹನುಮಂತಪ್ಪ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
