*ಮಾಕವಳ್ಳಿಯ ಹೇಮಗಿರಿ ಶುಗರ್ಸ್ ಅಂಡ್ ರಿನೀವಬಲ್ಸ್ ಪ್ರೈವೇಟ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಿದ ಕಾರ್ಖಾನೆ ಅಧ್ಯಕ್ಷ ವಿಜೆ ರವಿರೆಡ್ಡಿ*. *ಕಾರ್ಖಾನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣ. ಕಬ್ಬು ಬೆಳೆಗಾರರಿಂದ ಸಂಭ್ರಮಾಚರಣೆ*.ಕೃಷ್ಣರಾಜಪೇಟೆ ತಾಲೂಕಿನ ರೈತರ ಜೀವನಾಡಿಯಾಗಿರುವ ಮಾಕವಳ್ಳಿಯ ಹೇಮಗಿರಿ ಶುಗರ್ಸ್ ಅಂಡ್ ರಿನೀವಬಲ್ಸ್ ಪ್ರೈವೇಟ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯಕ್ಕೆ ಕಾರ್ಖಾನೆ ಅಧ್ಯಕ್ಷ ವಿಜೆ ರವಿರೆಡ್ಡಿ ಅವರು ದುರ್ಗಾ ಹೋಮದೊಂದಿಗೆ ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯವನ್ನು ನೆರವೇರಿಸಿ ಚಾಲನೆ ನೀಡಿದರು.ಪ್ರಸಕ್ತ ಕಬ್ಬು ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಯು 08 ಲಕ್ಷ ಟನ್ ಕಬ್ಬು ಅರೆಯುವ ಗುರಿಯನ್ನು ಹೊಂದಿದ್ದು ತಾಲೂಕಿನಲ್ಲಿ ಕಬ್ಬಿನ ಕೊರತೆ ಇರುವುದರಿಂದ ಕಬ್ಬನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಹಾಗೂ ಕಬ್ಬಿನ ಇಳುವರಿಯನ್ನು ಹೆಚ್ಚಿಸಲು ಕಾರ್ಖಾನೆಯೂ ಅನೇಕ ಕಬ್ಬು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಪ್ರಸ್ತುತ ನಾಟಿ ಸಾಲಿಗೆ ಈ ಕೆಳಕಂಡ ಕಬ್ಬು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ರವಿರೆಡ್ಡಿ ಅವರು ಅಕ್ಟೋಬರ್ ತಿಂಗಳ ಅಂತ್ಯದವರೆಗೂ ಮುಂಗಾರು ಹಂಗಾಮಿನಲ್ಲಿ ಉತ್ತಮ ಇಳುವರಿ ನೀಡುವ ತಳಿಗಳ ಬಿತ್ತನೆ ಬೀಜವನ್ನು ಸಾಲದ ರೂಪದಲ್ಲಿ ಎರಡುವರೆ ಸಾವಿರ ಎಕರೆಗೆ ವಿತರಿಸಲಾಗುತ್ತಿದೆ. ಉತ್ತಮ ಇಳುವರಿ ನೀಡುವ ತಳಿಗಳ ಒಂದು ಕಣ್ಣಿನ ಸಸಿಗಳನ್ನು ಸಾಲದ ರೂಪದಲ್ಲಿ ಸುಮಾರು 500 ಎಕರೆಗೆ ವಿತರಿಸಲಾಗುತ್ತಿದೆ. ಬಿತ್ತನೆ ಸಸಿ ಮಡಿಗಳನ್ನು ಅಭಿವೃದ್ಧಿಪಡಿಸಲು 300 ಎಕರೆಗೆ ಉಚಿತವಾಗಿ ಬಿತ್ತನೆ ಬೀಜವನ್ನು ವಿತರಿಸಲಾಗುತ್ತಿದೆ. ಕಾರ್ಖಾನೆಗೆ ಕಬ್ಬು ಸರಬರಾಜು ಸುಗಮವಾಗಿ ಸಾಗಲು ಅನುಕೂಲವಾಗುವಂತೆ ಎರಡುವರೆ ಸಾವಿರಕ್ಕೂ ಹೆಚ್ಚಿನ ಕಬ್ಬು ಕಟಾವು ಮಾಡುವ ಕೃಷಿ ಕೂಲಿ ಕಾರ್ಮಿಕರನ್ನು ಬಳ್ಳಾರಿ ಜಿಲ್ಲೆಯಿಂದ ಸುಮಾರು ನಾಲ್ಕು ಕೋಟಿ ರೂ ಮುಂಗಡ ಹಣ ನೀಡಿ ಕರೆತರಲಾಗುತ್ತಿದೆ. ಕೃಷ್ಣರಾಜಪೇಟೆ ತಾಲೂಕಿನ ಕಬ್ಬು ಬೆಳೆಗಾರರು ಹಾಗೂ ರೈತ ಭಾಂದವರು ಈ ಹಿಂದೆ ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ಸರಬರಾಜು ಮಾಡುತ್ತಿದ್ದಂತೆ ಪ್ರಸ್ತುತ ಕಾರ್ಖಾನೆಯು ಶ್ರೀ ಚಾಮುಂಡೇಶ್ವರಿ ಶುಗರ್ ಲಿಮಿಟೆಡ್ ಸಮೂಹಕ್ಕೆ ಹಸ್ತಾಂತರ ವಾಗಿರುವುದರಿಂದ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಹೆಸರು ಹೇಮಗಿರಿ ಶುಗರ್ಸ್ ಅಂಡ್ ರಿನೀವಬಲ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಮರುನಾಮಕರಣಗೊಂಡು ಸರ್ಕಾರದಲ್ಲಿ ನೋಂದಣಿ ಆಗಿರುತ್ತದೆ. ಕಳೆದ ಕಬ್ಬು ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಬೆಳೆಗಾರರು ಸರಬರಾಜು ಮಾಡಿರುವ ಕಬ್ಬಿನ ಸಂಪೂರ್ಣ ಬಾಕಿ ಹಣವನ್ನು ಪ್ರತಿ ಟನ್ನಿಗೆ 3154/- ಎಫ್‌ಆರ್‌ಪಿ ದರದಂತೆ ಪಾವತಿಸಲಾಗಿದೆ ಪ್ರಸ್ತುತ ರೈತರು ಹಾಗೂ ಕಬ್ಬು ಬೆಳೆಗಾರರು ಕಾರ್ಖಾನೆಗೆ ಸರಬರಾಜು ಮಾಡುವ ಪ್ರತಿ ಟನ್ ಕಬ್ಬಿಗೆ 3291/=ರೂ ಎಫ್ ಆರ್ ಪಿ ದರದಂತೆ 30 ದಿನಗಳ ಒಳಗಾಗಿ ಒಂದೇ ಕಂತಿನಲ್ಲಿ ಸಂಪೂರ್ಣವಾಗಿ ಕಬ್ಬು ಹಣವನ್ನು ರೈತರಿಗೆ ಪಾವತಿಸಲಾಗುವುದು. ಕಾರ್ಖಾನೆಯು ಕಪ್ಪು ಅರೆಯುವ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯನ್ನು ಸಂಪೂರ್ಣವಾಗಿ ಗಮನದಲ್ಲಿಟ್ಟುಕೊಂಡು ರೈತರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಕಾರ್ಖಾನೆಯ ಅಧ್ಯಕ್ಷ ರವಿರೆಡ್ಡಿ ಸ್ಪಷ್ಟಪಡಿಸಿದರು.ಕೃಷ್ಣರಾಜಪೇಟೆ ತಾಲೂಕಿನ ರೈತರು ಹಾಗೂ ಗಬ್ಬು ಬೆಳೆಗಾರರ ಸಮಗ್ರವಾದ ಅಭಿವೃದ್ಧಿಯನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಕೆಲಸ ಮಾಡುತ್ತಿರುವ ಸಕ್ಕರೆ ಕಾರ್ಖಾನೆಯು ಕಾರ್ಖಾನೆ ನಿರ್ವಹಣೆ, ಕೋ ಜನರೇಶನ್ ಘಟಕದ ದಕ್ಷ ನಿರ್ವಹಣೆ ಹಾಗೂ ಅತ್ಯುತ್ತಮವಾದ ಸಕ್ಕರೆ ಕಾರ್ಖಾನೆಯ ಕಾರ್ಯಾಚರಣೆಗೆ ರಾಜ್ಯಮಟ್ಟದ ಪ್ರಶಸ್ತಿ ಮತ್ತು ಶಿಷ್ಟ ಅವರಿಂದ ಅತ್ಯುತ್ತಮ ಕೋ ಜನರೇಶನ್ ಪ್ರಶಸ್ತಿಯನ್ನು ಪಡೆದುಕೊಂಡಿದೆ ಆದ್ದರಿಂದ ಸದರಿ ಸಾಲಿಗೆ ರೈತರು ಒಪ್ಪಿಗೆ ಮಾಡಿಸಿರುವ ಮತ್ತು ಒಪ್ಪಿಗೆ ರಹಿತ ಕಬ್ಬನ್ನು ಈ ಹಿಂದಿನ ಸಾಲುಗಳಲ್ಲಿ ಸರಬರಾಜು ಮಾಡಿ ಸಹಕರಿಸಿದಂತೆ ಪ್ರಸಕ್ತ ಸಾಲಿನಲ್ಲಿಯೂ ಸಂಪೂರ್ಣವಾಗಿ ಸರಬರಾಜು ಮಾಡಿ ರೈತರ ಹಾಗೂ ಕಾರ್ಖಾನೆಯ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕು ಎಂದು ರವಿ ರೆಡ್ಡಿ ಮನವಿ ಮಾಡಿದರು.

ಇಂದು ನಡೆದ ಕಬ್ಬು ಅರೆಯುವ ಪೂಜಾ ಕಾರ್ಯಕ್ರಮ ಹಾಗೂ ಚಂಡಿಕಾ ಹೋಮದಲ್ಲಿ ಕಾರ್ಖಾನೆಯ ಹಿರಿಯ ಅಧಿಕಾರಿಗಳಾದ ಮೇಯನ್, ಅಶೋಕ್ ಕುಮಾರ್, ಕೆ. ಬಾಬುರಾಜ್, ಆರ್ ವಿ ಕುಮಾರ್, ಮೋಹನ್, ರವಿಚಂದ್ರನ್, ದತ್ತಾತ್ರೇಯ ಹಾಗೂ ಚಾಮುಂಡೇಶ್ವರಿ ಶುಗರ್ಸ್ ಲಿಮಿಟೆಡ್ ನ ಅಧ್ಯಕ್ಷರಾದ ನಾಚಿಯಪ್ಪನ್ ಮುಖ್ಯ ಹಣಕಾಸು ಅಧಿಕಾರಿಯಾದ ಎನ್ ಶ್ರೀನಿವಾಸನ್, ಚೀಫ್ ಜನರಲ್ ಮ್ಯಾನೇಜರ್ ಪೂರ್ಣಸ್ವಾಮಿ, ಹೇಮಾವತಿ ಸಕ್ಕರೆ ಕಾರ್ಖಾನೆಯ ಕಬ್ಬು ವಿಭಾಗದ ಅಧಿಕಾರಿ ದೇವೇಗೌಡ ಹಾಗೂ ಕಾರ್ಖಾನೆ ಆಡಳಿತ ಹಾಗೂ ಸಿಬ್ಬಂದಿ ವರ್ಗದವರು ಕೃಷ್ಣರಾಜಪೇಟೆ ತಾಲೂಕು ಹಾಗೂ ನಾಗಮಂಗಲ ತಾಲೂಕಿನ ರೈತ ಬಾಂಧವರು, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್ ಕಾರ್ಯದರ್ಶಿ ಬೋರಾಪುರ ಮಂಜುನಾಥ್, ಖಜಾಂಚಿ ವಡಕಹಳ್ಳಿ ಮಂಜೇಗೌಡ ಸೇರಿದಂತೆ ಪದಾಧಿಕಾರಿಗಳು ಹಾಗೂ ಲಾರಿಗಳು ಮತ್ತು ಟ್ರ್ಯಾಕ್ಟರ್ ಮಾಲೀಕರ ಸಂಘದ ಪದಾಧಿಕಾರಿಗಳು ಹಾಗೂ ಕಬ್ಬು ವಿಭಾಗಗಳ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. *
ವರದಿ. ಡಾ.ಕೆ.ಆರ್.ನೀಲಕಂಠ ಕೃಷ್ಣರಾಜಪೇಟೆ. ಮಂಡ್ಯ*