
ಶಿಕ್ಷಣದ ಮೂಲಕ ಮಹಿಳಾ ಸಬಲೀಕರಣ; ಸಾವಿತ್ರಿಬಾಯಿ ಫುಲೆ ಅವರ ಪರಂಪರೆ.
ಜ್ಞಾನದ ಮೂಲಕ ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವವರನ್ನು ಗೌರವಿಸಲು ಶಿಕ್ಷಕರ ದಿನವು ಒಂದು ಶುಭ ಸಂದರ್ಭವಾಗಿದೆ.

ಈ ದಿನದಂದು ಭಾರತದ ಮೊದಲ ಮಹಿಳಾ ಶಿಕ್ಷಕಿ ಮತ್ತು ನಮ್ಮ ದೇಶದಲ್ಲಿ ಮಹಿಳಾ ಶಿಕ್ಷಣಕ್ಕೆ ಅಡಿಪಾಯ ಹಾಕಲು ಶತಮಾನಗಳಷ್ಟು ಹಳೆಯದಾದ ಪೂರ್ವಾಗ್ರಹಗಳನ್ನು ಪ್ರಶ್ನಿಸಿದ ಕ್ರಾಂತಿಕಾರಿ ಸುಧಾರಕಿ ಸಾವಿತ್ರಿಬಾಯಿ ಫುಲೆ (1831–1897) ಅವರ ಅಸಾಧಾರಣ ಕೊಡುಗೆಗಳನ್ನು ನಾವು ನೆನಪಿಸಿಕೊಳ್ಳುವುದು ಅತ್ಯಂತ ಸೂಕ್ತವಾಗಿದೆ
.ಮಹಿಳೆಯರಿಗೆ ಶಿಕ್ಷಣವನ್ನು ನಿರಾಕರಿಸಲಾಗುತ್ತಿದ್ದ ಮತ್ತು ಹೆಚ್ಚಾಗಿ ಹಿಂಸಾತ್ಮಕವಾಗಿ ವಿರೋಧಿಸಲ್ಪಡುತ್ತಿದ್ದ ಸಮಯದಲ್ಲಿ, ಸಾವಿತ್ರಿಬಾಯಿ ಫುಲೆ, ತಮ್ಮ ಪತಿ ಮಹಾತ್ಮ ಜ್ಯೋತಿಬಾ ಫುಲೆ ಅವರೊಂದಿಗೆ 1848ರಲ್ಲಿ ಪುಣೆಯಲ್ಲಿ ಬಾಲಕಿಯರಿಗಾಗಿ ಶಾಲೆಗಳನ್ನು ಆರಂಭಿಸಿದರು.
ಅವರು ಕೇವಲ ಕಲಿಸುವುದಲ್ಲದೆ ಪಠ್ಯಕ್ರಮವನ್ನೂ ಸಹ ಅವರೇ ರೂಪಿಸಿದರು ಮತ್ತು ಮಹಿಳೆಯರು ಜ್ಞಾನವನ್ನು ಪಡೆಯುವಂತೆ ಉತ್ತೇಜಿಸಲು ಕವನ ಬರೆದರು. ಸಾಂಪ್ರದಾಯಿಕ ಪುರುಷರು ಅವರ ಮೇಲೆ ಮಣ್ಣು ಮತ್ತು ಕಲ್ಲುಗಳನ್ನು ಎಸೆದ ಕಾರಣ ಪ್ರತಿದಿನ ಬಿಡಿ ಸೀರೆಯೊಂದಿಗೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಅವರ ಜೀವನವು ಧೈರ್ಯಕ್ಕೆ ಸಾಕ್ಷಿಯಾಗಿದೆ. ಆದರೂ ಅವರು ಪಟ್ಟುಬಿಡದೆ ತಮ್ಮ ಕೆಲಸ ಮುಂದುವರೆದರು, ಏಕೆಂದರೆ ಭಾರತದ ಭವಿಷ್ಯವು ಅದರ ಹೆಣ್ಣುಮಕ್ಕಳ ಶಿಕ್ಷಣದಲ್ಲಿದೆ ಎಂಬುದು ಅವರಿಗೆ ತಿಳಿದಿತ್ತು.
ಸುಧಾರಕರ ಪರಂಪರೆ ಮತ್ತು ಸಮಾನತೆಯ ಕರೆಸಾವಿತ್ರಿಬಾಯಿ ಫುಲೆ ತಮ್ಮ ಹೋರಾಟದಲ್ಲಿ ಒಬ್ಬಂಟಿಯಾಗಿರಲಿಲ್ಲ. ಭಾರತದ ಸಾಮಾಜಿಕ ಸುಧಾರಣಾ ಪಯಣವನ್ನು ಸತಿ ಪದ್ದತಿ, ಬಾಲ್ಯ ವಿವಾಹ ವಿರುದ್ಧ ಮತ್ತು ಮಹಿಳಾ ಶಿಕ್ಷಣಕ್ಕಾಗಿ ಪ್ರಚಾರ ಮಾಡಿದ ರಾಜಾ ರಾಮ್ ಮೋಹನ್ ರಾಯ್; ವಿಧವಾ ಪುನರ್ವಿವಾಹ ಮತ್ತು ಹೆಣ್ಣುಮಕ್ಕಳ ಶಿಕ್ಷಣವನ್ನು ಪ್ರತಿಪಾದಿಸಿದ ಈಶ್ವರ ಚಂದ್ರ ವಿದ್ಯಾಸಾಗರ್; ಮತ್ತು “ಮಹಿಳೆಯರ ಶಿಕ್ಷಣವು ಸಾಮಾಜಿಕ ಬದಲಾವಣೆಯ ಅತ್ಯಂತ ಶಕ್ತಿಶಾಲಿ ಏಜೆಂಟ್” ಎಂದು ಒತ್ತಿ ಹೇಳಿದ ಮಹಾತ್ಮ ಗಾಂಧಿ ಅವರಂತಹ ನಾಯಕರು ಮಾರ್ಗದರ್ಶನ ಮಾಡಿದ್ದಾರೆ. ಶಿಕ್ಷಣದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸದೆ ಭಾರತವು ನಿಜವಾದ ಸ್ವಾತಂತ್ರ್ಯವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಪ್ರತಿಯೊಬ್ಬ ಸುಧಾರಕರೂ ನಂಬಿದ್ದರು.ಈ ಪರಂಪರೆ ಆಧುನಿಕ ಭಾರತದ ಆಶೋತ್ತರಗಳನ್ನು ರೂಪಿಸುತ್ತಲೇ ಇದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಭಾರತದ ಅಭಿವೃದ್ಧಿ ಪ್ರಯಾಣವನ್ನು ಮಹಿಳೆಯರ ನೇತೃತ್ವದ ಅಭಿವೃದ್ಧಿಯಿಂದ ಮುನ್ನಡೆಸಲಾಗುತ್ತದೆ’ ಎಂದು ಆಗಾಗ್ಗೆ ಒತ್ತಿ ಹೇಳುತ್ತಲೇ ಇದ್ದಾರೆ. ವಿಕಸಿತ ಭಾರತ@2047ರ ದೂರದೃಷ್ಟಿಯು ರಾಷ್ಟ್ರ ನಿರ್ಮಾಣದಲ್ಲಿ ಸಮಾನ ಪಾಲುದಾರರಾಗಿ ಮಹಿಳೆಯರ ಸಬಲೀಕರಣದಲ್ಲಿ ನೆಲೆಗೊಂಡಿದೆ, ಶಿಕ್ಷಣವು ಈ ಸಬಲೀಕರಣದ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ.
ಮಹಿಳೆಯರು ಮತ್ತು ಶಿಕ್ಷಣ: ಈರೆಗಿನ ಪ್ರಗತಿಸ್ವಾತಂತ್ರ್ಯಾನಂತರದ ಪ್ರಗತಿ ಅತ್ಯಂತ ಗಮನಾರ್ಹವಾಗಿದೆ. 1951ರಲ್ಲಿ ಮಹಿಳಾ ಸಾಕ್ಷರತೆ ಕೇವಲ ಶೇ.8.86ರಷ್ಟಿತ್ತು, ಇಂದು ಶೇ.65.46ಕ್ಕೆ ಏರಿಕೆಯಾಗಿದೆ (ಜನಗಣತಿ 2011) ಮತ್ತು ಇತ್ತೀಚಿನ ಸಮೀಕ್ಷೆಗಳು ಶಾಲೆಗಳಲ್ಲಿ ಬಾಲಕಿಯರ ದಾಖಲಾತಿಯಲ್ಲಿ ಹೆಚ್ಚಳವನ್ನು ಸೂಚಿಸುವುದರೊಂದಿಗೆ ಸುಧಾರಿಸುತ್ತಲೇ ಇದೆ. ಶಿಕ್ಷಣಕ್ಕಾಗಿ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ (ಯು.ಡಿ.ಐ.ಎಸ್.ಇ+) 2021–22 ರ ಪ್ರಕಾರ, ಪ್ರಾಥಮಿಕ ಹಂತದಲ್ಲಿ ಬಾಲಕಿಯರ ಒಟ್ಟು ದಾಖಲಾತಿ ಅನುಪಾತ (ಜಿ.ಇ.ಆರ್) ಈಗ ಬಾಲಕರಿಗಿಂತ ಹೆಚ್ಚಾಗಿದೆ.2015ರಲ್ಲಿ ಆರಂಭಿಸಲಾದ “ಬೇಟಿ ಬಚಾವೋ ಬೇಟಿ ಪಡಾವೋ” ನಂತಹ ನರೇಂದ್ರ ಮೋದಿ ಸರ್ಕಾರದ ಯೋಜನೆಗಳು ಸಾಮಾಜಿಕ ಮನೋಭಾವಗಳನ್ನು ಸಂಪೂರ್ಣ ಬದಲಾಯಿಸಿವೆ, ಮಕ್ಕಳ ಲಿಂಗ ಅನುಪಾತವನ್ನು ಸುಧಾರಿಸಿವೆ ಮತ್ತು ಶಾಲಾ ಶಿಕ್ಷಣದ ಪ್ರತಿಯೊಂದು ಹಂತದಲ್ಲೂ ಬಾಲಕಿಯರ ದಾಖಲಾತಿಯನ್ನು ಹೆಚ್ಚಿಸಿವೆ.
ಪೋಷಣ್ ಅಭಿಯಾನ, ಮಿಷನ್ ಶಕ್ತಿ ಮತ್ತು ಸಾಮರ್ಥ್ಯದಂತಹ ಉಪಕ್ರಮಗಳು ಸಮಗ್ರ ಚೌಕಟ್ಟನ್ನು ಒದಗಿಸುತ್ತವೆ – ಶಿಕ್ಷಣವು ಪೋಷಣೆ, ಸುರಕ್ಷತೆ ಮತ್ತು ಅವಕಾಶಗಳಿಂದ ಬೆಂಬಲಿತವಾಗಿದೆ ಎಂದು ಖಚಿತಪಡಿಸುತ್ತದೆ. ಯು.ಡಿ.ಐ.ಎಸ್.ಇ+ 2024-25 ದತ್ತಾಂಶದ ಪ್ರಕಾರ, ಮೊದಲ ಬಾರಿಗೆ, ಮಹಿಳಾ ಶಿಕ್ಷಕರು ಈಗ ಭಾರತದ ಒಟ್ಟು ಶಾಲಾ ಶಿಕ್ಷಕರಲ್ಲಿ ಶೇ.54.2ರಷ್ಟಿದ್ದಾರೆ, ಇದು 2014–15ರಲ್ಲಿ ಶೇ.46.9 ರಿಂದ ಗಮನಾರ್ಹ ಏರಿಕೆಯಾಗಿದೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ (ಎನ್.ಐ.ಪಿ.ಸಿ.ಸಿ.ಡಿ) ಅನ್ನು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ (ಎಸ್.ಪಿ.ಎನ್.ಐ.ಡಬ್ಲೂ.ಸಿ.ಡಿ) ಎಂದು ಮರುನಾಮಕರಣ ಮಾಡುವ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಈ ಸಂಸ್ಥೆಯು ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಬಲವರ್ಧನೆಗೊಳಿಸಲು ಸಾಮರ್ಥ್ಯ ವೃದ್ಧಿ, ತರಬೇತಿ ಮತ್ತು ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ನೀತಿಗಳು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳುತ್ತದೆ. ಸಾವಿತ್ರಿಬಾಯಿ ಫುಲೆ ಅವರ ಹೆಸರನ್ನು ಹೊಂದುವ ಮೂಲಕ ಶಿಕ್ಷಣ ಮತ್ತು ಸುಧಾರಣೆಯೊಂದಿಗೆ ಮಹಿಳಾ ಸಬಲೀಕರಣದ ಅವರ ದೂರದೃಷ್ಟಿಯು ಸಂಸ್ಥೆಯು ಗೌರವ ಸಲ್ಲಿಸಿದಂತಾಗಿದೆ. ಆದರೂ ಸವಾಲುಗಳು ಹಾಗೆಯೇ ಉಳಿದಿವೆ. ಬಾಲ್ಯ ವಿವಾಹ, ಸುರಕ್ಷತಾ ಕಾಳಜಿಗಳು ಮತ್ತು ಆರ್ಥಿಕ ಒತ್ತಡಗಳಿಂದಾಗಿ ಪ್ರೌಢ ಹಂತದಲ್ಲಿ ಬಾಲಕಿಯರಲ್ಲಿ ಶಾಲೆ ತೊರೆಯುವ ಪ್ರಮಾಣ ಹೆಚ್ಚಾಗುತ್ತದೆ.
ಪ್ರತಿ ಬಾಲಕಿಯೂ ತನ್ನ ಶಿಕ್ಷಣವನ್ನು ಅಡೆತಡೆಯಿಲ್ಲದೆ ಮುಂದುವರಿಸುವುದನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರವು ವಿದ್ಯಾರ್ಥಿವೇತನಗಳು, ವಸತಿ ಸೌಲಭ್ಯಗಳು, ಮುಟ್ಟಿನ ನೈರ್ಮಲ್ಯ ಉಪಕ್ರಮಗಳು ಮತ್ತು ಡಿಜಿಟಲ್ ಕಲಿಕಾ ಅವಕಾಶಗಳ ಮೂಲಕ ಪರಿಹಾರ ಒದಗಿಸಲು ಬದ್ಧವಾಗಿದೆ.ರಾಷ್ಟ್ರ ನಿರ್ಮಾಣಕಾರರಾಗಿ ಶಿಕ್ಷಕರು ಮಹಿಳಾ ಶಿಕ್ಷಕಿಯರ ಪಾತ್ರ ವಿಶೇಷ ಮತ್ತು ಅತ್ಯಂತ ಮಹತ್ವದ್ದಾಗಿದೆ. ಅವರು ಜ್ಞಾನವನ್ನು ನೀಡುವುದರ ಜೊತೆಗೆ ಲಕ್ಷಾಂತರ ಯುವತಿಯರಿಗೆ ಮಾದರಿಯಾಗುವ ಮೂಲಕ ಸಾವಿತ್ರಿಬಾಯಿ ಫುಲೆ ಅವರ ಬೆಳಕಿನ ಜ್ಯೋತಿಯನ್ನು ಮುಂದೆ ಕೊಂಡೊಯ್ಯುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ, ಮಹಿಳಾ ಶಿಕ್ಷಕರ ಉಪಸ್ಥಿತಿಯು ಶಾಲೆಗಳಲ್ಲಿ ಬಾಲಕಿಯರ ದಾಖಲಾತಿ ಮತ್ತು ಶಿಕ್ಷಣ ಅವಕಾಶಗಳನ್ನು ಹೆಚ್ಚಿಸುತ್ತದೆ ಎಂಬುದು ಅಧ್ಯಯನಗಳಿಂದ ಕಂಡುಬಂದಿದೆ. ಬಡತನದ ವರ್ತುಲದಿಂದ ಹೊರಬರಲು ಮತ್ತು ಉತ್ತಮ ಭವಿಷ್ಯವನ್ನು ಅರಸಲು ಕುಟುಂಬಗಳನ್ನು ಸಬಲೀಕರಣಗೊಳಿಸಲು ಅವರ ಕೊಡುಗೆ ನಿರ್ಣಾಯಕವಾಗಿದೆ.ಶಿಕ್ಷಕರ ದಿನದಂದು, ನಾವು ವೃತ್ತಿಯನ್ನು ಮಾತ್ರವಲ್ಲದೆ ಅದು ಪ್ರತಿನಿಧಿಸುವ ದೊಡ್ಡ ದೂರದೃಷ್ಟಿಯನ್ನು ಅಂದರೆ – ಜ್ಞಾನವು ವಿಮೋಚನೆಯಾಗಿ, ಶಿಕ್ಷಣವು ಸಬಲೀಕರಣವಾಗಿ ಮತ್ತು ಬೋಧನೆಯು ರಾಷ್ಟ್ರ ನಿರ್ಮಾಣವಾಗಿ ಎಂಬುದನ್ನೂ ಸಹ ಸಂಭ್ರಮಿಸಬೇಕಿದೆ. ವಿಕಸಿತ ಭಾರತದತ್ತ 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ದೂರದೃಷ್ಟಿಯತ್ತ ಸಾಗುತ್ತಿರುವಾಗ ಶಿಕ್ಷಣವು ಬೆಳವಣಿಗೆಯ ಪ್ರಮುಖ ಚಾಲಕಶಕ್ತಿಯಾಗಿ ಉಳಿದಿದೆ.
ಮಹಿಳಾ ಶಿಕ್ಷಣವು ವಿಶೇಷವಾಗಿ ಪರಿಣಾಮವನ್ನು ದ್ವಿಗುಣಗೊಳಿಸುತ್ತದೆ: ವಿದ್ಯಾವಂತ ಮಹಿಳೆಯರು ಉತ್ತಮ ಆರೋಗ್ಯ ರಕ್ಷಣೆ, ಕಡಿಮೆ ಶಿಶು ಮರಣ, ಹೆಚ್ಚಿನ ಕುಟುಂಬ ಆದಾಯ ಮತ್ತು ಸದೃಢ ಸಮುದಾಯಗಳನ್ನು ಖಾತ್ರಿಪಡಿಸುತ್ತಾರೆ. ಯುನೆಸ್ಕೋ ಪ್ರಕಾರ, ಪ್ರತಿ ಹೆಚ್ಚುವರಿ ವರ್ಷದಲ್ಲಿ ಹೆಣ್ಣು ಮಗುವಿಗೆ ಶಾಲಾ ಶಿಕ್ಷಣವು ಆಕೆಯ ಭವಿಷ್ಯದ ಗಳಿಕೆಯನ್ನು ಶೇ.10–20ರಷ್ಟು ವೃದ್ಧಿಸುತ್ತದೆ.ಆದ್ದರಿಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ತನ್ನ ಯೋಜನೆಗಳನ್ನು ಸುಸ್ಥಿರ ಅಭಿವೃದ್ಧಿ ಗುರಿ (ಎಸ್.ಡಿ.ಜಿ)-4 (ಗುಣಮಟ್ಟದ ಶಿಕ್ಷಣ) ಮತ್ತು ಎಸ್.ಡಿ.ಜಿ-5 (ಲಿಂಗ ಸಮಾನತೆ) ಯೊಂದಿಗೆ ಸಂಯೋಜಿಸುವುದನ್ನು ಮುಂದುವರೆಸಿದೆ, ಯಾವೊಬ್ಬ ಬಾಲಕಿಯೂ ಹಿಂದೆ ಉಳಿಯದಂತೆ ನೋಡಿಕೊಳ್ಳುತ್ತದೆ. ಪೋಷಣೆ, ಸುರಕ್ಷತೆ ಮತ್ತು ಕೌಶಲ್ಯ ಅಭಿವೃದ್ಧಿಯೊಂದಿಗೆ ಶಿಕ್ಷಣವನ್ನು ಸಂಯೋಜಿಸುವ ಮೂಲಕ, ಮಹಿಳೆಯರು ವಿದ್ಯಾರ್ಥಿಗಳು, ಶಿಕ್ಷಕರು, ಉದ್ಯಮಿಗಳು ಮತ್ತು ನಾಯಕಿಯರಾಗಿ ಅಭಿವೃದ್ಧಿ ಹೊಂದಲು ಅನುಕೂಲವಾಗುವಂತಹ ಪೂರಕ ವ್ಯವಸ್ಥೆಯನ್ನು ನಾವು ನಿರ್ಮಿಸುತ್ತಿದ್ದೇವೆ.ಸಾಮೂಹಿಕ ಸಂಕಲ್ಪನಿಜವಾದ ಪ್ರಗತಿಯು ಧೈರ್ಯದಿಂದ ಹುಟ್ಟುತ್ತದೆ ಎಂಬುದನ್ನು ಸಾವಿತ್ರಿಬಾಯಿ ಫುಲೆ ಅವರ ಕಥೆ ನಮಗೆ ನೆನಪು ಮಾಡಿಕೊಡುತ್ತದೆ. ಪುಣೆಯಲ್ಲಿನ ಅವರ ಸಾಧಾರಣ ತರಗತಿಯಿಂದ ಹಿಡಿದು ಪ್ರತಿದಿನ ಕೋಟ್ಯಂತರ ಬಾಲಕಿಯರು ಕಲಿಯುವ ಆಧುನಿಕ ಭಾರತದ ತರಗತಿಗಳವರೆಗೆ, ಈ ಪಯಣವು ಮಹಿಳೆಯರು ಮತ್ತು ಕಲಿಕೆಯ ಕಡೆಗೆ ಸಮಾಜದ ದೂರದೃಷ್ಟಿಯಲ್ಲಿ ಆಳವಾದ ಪರಿವರ್ತನೆಯನ್ನು ಪ್ರತಿಬಿಂಬಿಸುತ್ತದೆ. ಆದರೆ ಈ ಧ್ಯೇಯವು ಇನ್ನೂ ಪೂರ್ಣಗೊಂಡಿಲ್ಲ. ನಾವು ಶಿಕ್ಷಕರ ದಿನವನ್ನು ಆಚರಿಸುತ್ತಿರುವಾಗ, ಅವರ ದೂರದೃಷ್ಟಿ ಮತ್ತು ನಮ್ಮ ಪ್ರಧಾನಮಂತ್ರಿ ಅವರ – ‘ಮಹಿಳಾ ಸಬಲೀಕರಣವು ಕಲ್ಯಾಣದ ವಿಷಯವಲ್ಲ, ಆದರೆ ರಾಷ್ಟ್ರೀಯ ಶಕ್ತಿಯ ವಿಷಯವಾಗಿದೆ’ ಎಂಬ ಕರೆಗೆ ನಮ್ಮನ್ನು ನಾವು ಮರು ಸಮರ್ಪಿಸೋಣ.
ಪ್ರತಿಯೊಬ್ಬ ಬಾಲಕಿಯೂ ಶಿಕ್ಷಣ ಪಡೆಯುವುದನ್ನು, ಪ್ರತಿಯೊಬ್ಬ ಮಹಿಳೆಯೂ ಸಬಲೀಕರಣಗೊಳ್ಳುವುದನ್ನು ಮತ್ತು ಪ್ರತಿಯೊಬ್ಬ ಶಿಕ್ಷಕರಿಗೂ ಗೌರವ ದೊರೆಯುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ, ನಾವು ನಮ್ಮ ಕನಸಿನ ಭಾರತವನ್ನು ನಿರ್ಮಿಸಬಹುದು.ಸಾವಿತ್ರಿಬಾಯಿ ಫುಲೆಯವರ ಪರಂಪರೆ ಕೇವಲ ಇತಿಹಾಸವಲ್ಲ – ಇದು ನಮ್ಮ ವರ್ತಮಾನಕ್ಕೆ ಜೀವಂತ ಮಾರ್ಗದರ್ಶಿ ಮತ್ತು ನಮ್ಮ ಭವಿಷ್ಯಕ್ಕೆ ದಾರಿದೀಪವಾಗಿದೆ. ಅವರ ಧೈರ್ಯದ ಬೆಳಕಿನಲ್ಲಿ, ನಾವು ವಿಕಸಿತ ಭಾರತಕ್ಕೆ, ಅದರ ಹೆಣ್ಣುಮಕ್ಕಳು ಮತ್ತು ಪುತ್ರರಿಂದ ಸಮಾನವಾಗಿ ಮುನ್ನಡೆಸಲ್ಪಟ್ಟ ಅಭಿವೃದ್ಧಿ ಹೊಂದಿದ ಭಾರತದ ಹಾದಿಯನ್ನು ನೋಡುತ್ತೇವೆ.
ಸಾವಿತ್ರಿ ಠಾಕೂರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವರು ಭಾರತ ಸರ್ಕಾರ
