
ನರೇಗಲ್ ಆಶ್ರಯ ಕಾಲೋನಿ ಗಣೇಶೋತ್ಸವದಲ್ಲಿ ಪಾಲ್ಗೊಂಡ ಗದಗ ಜಿಲ್ಲಾ ಎಸ್‌ಪಿ ರೋಹನ್ ಜಗದೀಶ್‌ಹಿಂದೂ-ಮುಸ್ಲಿಂರು ಒಗ್ಗಟಾಗಿ ಪ್ರತಿಷ್ಠಾಪಿಸುವ ʼಭಾವೈಕ್ಯ ಗಣೇಶೋತ್ಸವʼದಲ್ಲಿ ಪೊಲೀಸ್ ಇಲಾಖೆ ಭಾಗಿ
ಮಕ್ಕಳೊಂದಿಗೆ ಬೆರೆತು ಪ್ರೀತಿಯಿಂದ ಮಾತನಾಡಿಸಿದ ಎಸ್‌ಪಿ ನಡೆಗೆ ಶ್ಲಾಘಿಸಿದ ಜನರು—ಗದಗ ಜಿಲ್ಲೆ ಗಜೇಂದ್ರಗಡ ತಾಲ್ಲೂಕಿನ ನರೇಗಲ್ ಪಟ್ಟಣದ 3ನೇ ವಾರ್ಡ್‌ನ ಜಕ್ಕಲಿ ರೋಡ್ ಆಶ್ರಯ ಕಾಲೋನಿಯಲ್ಲಿ ಪ್ರತಿವರ್ಷದಂತೆ ಈ ಬಾರಿಯು ಹಿಂದೂ-ಮುಸ್ಲಿಂ ಧರ್ಮಿಯರು ಒಗ್ಗಟ್ಟಿನಿಂದ ಪ್ರತಿಷ್ಠಾಪಿಸುವ ʼಭಾವೈಕ್ಯ ಗಣೇಶೋತ್ಸವʼದಲ್ಲಿ ಶನಿವಾರ ಸಂಜೆ ಮಾನ್ಯ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ರೋಹನ್ ಜಗದೀಶ್ ಅವರು ಪಾಲ್ಗೊಂಡರು.ಎಲ್ಲಾ ಧರ್ಮಿಯರು ಸಹಬಾಳ್ವೆಯಿಂದ ಅರ್ಥಗರ್ಭಿತವಾಗಿ ಆಚರಣೆ ಮಾಡುವ ಗಣೇಶೋತ್ಸವದ ಬಗ್ಗೆ ಪತ್ರಿಕೆಗಳಲ್ಲಿ ಸ್ಟೋರಿಗಳು ಪ್ರಕಟವಾದ ಕಾರಣ.

ಖುದ್ದಾಗಿ ಎಸ್‌ಪಿಯವರಾದ ಶ್ರೀ ರೋಹನ್ ಜಗದೀಶ್ ಅವರೇ ಫೋನ್ ಮಾಡಿ ಮಾಹಿತಿ ತಿಳಿದು ಭೇಟಿ ನೀಡಿದ್ದು ವಿಶೇಷವಾಗಿದೆ. ಇಲ್ಲಿನ ಗಣಪತಿ ಉತ್ಸವ ಜಿಲ್ಲೆಗೆ ಮಾದರಿಯಾಗಿದೆ. ಇದನ್ನು ಹೀಗೆ ಮುಂದೊರೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.ಬಡವರಿಗಾಗಿ ಹಂಚಿಕೆ ಮಾಡಲಾದ ಆಶ್ರಯ ಕಾಲೋನಿಯ ಓಣಿಗೆ ನಾಲ್ಕು ದಶಕಗಳ ನಂತರ ಜಿಲ್ಲೆ ಎಸ್‌ಪಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ತಂಡ ಇದೇ ಮೊದಲ ಬಾರಿಗೆ ಆಗಮಿಸಿರುವುದಕ್ಕೆ ನಿವಾಸಸಿಗಳು ಖುಷಿಪಟ್ಟರು ಹಾಗೂ ಆರತಿ ಮಾಡುವ ಮೂಲಕ ಸ್ವಾತಿಸಿದರು. ನಂತರ ಪೊಲೀಸ್ ಇಲಾಖೆಯವರು ಗಣಪತಿ ಪೂಜೆಯಲ್ಲಿ ಪಾಲ್ಗೊಂಡರು. ಇದೇ ವೇಳೆ ಎಸ್‌ಪಿ ರೋಹನ್ ಜಗದೀಶ್ ಅವರು ಮುದ್ದು ಮಕ್ಕಳನ್ನು ಎತ್ತಿಕೊಂಡು ಮುದ್ದಾಡುವುದು, ಶಾಲಾ ಮಕ್ಕಳನ್ನು ಮಾತನಾಡಿಸುವುದು, ಅವರಿಗೆ ಮುಂದೇನು ಆಗುತಿಯಾ ಎಂದು ಪ್ರಶ್ನೆ ಕೇಳಿ ಪ್ರೋತ್ಸಾಯಿಸದನ್ನು ನೋಡಿದ ಜನರು ಚಪ್ಪಾಳೆ ತಟ್ಟಿದರು.

ನಂತರ ಓಣಿಯ ಜನರೊಂದಿಗೆ ಕೆಲಕಾಲ ಬೆರೆತರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿನಿಯರನ್ನು ಕರೆದು ಅವರ ಓದಿನ ಬಗ್ಗೆ, ಅವರ ಪ್ರಗತಿ ಬಗ್ಗೆ ಕೇಳಿದರು ಹಾಗೂ ಇದೇ ಓಣಿಯಿಂದ ಮಹಿಳಾ ಪಿಎಸ್‌ಐ, ಎಸ್‌ಪಿಗಳು ಆಗಲಿ ಎಂದು ಬೆನ್ನು ತಟ್ಟಿದರು. ನಂತರ ನಿವಾಸಿಗಳ ಒತ್ತಾಸೆಗೆ ಗ್ರೂಪ್ ಫೋಟೋ ತೆಗೆಸಿಕೊಂಡು ರೋಣ ಕಡೆಗೆ ನಿರ್ಗಮಿಸಿದರು. ಈ ವೇಳೆ ನರಗುಂದ ಡಿವೈಎಸ್‌ಪಿ ಶ್ರೀ ಪ್ರಭುಗೌಡ ಕಿರೇದಹಳ್ಳಿ, ರೋಣ ಸಿಪಿಐ ಶ್ರೀ ಎಸ್. ಎಸ್. ಬೀಳಗಿ, ನರೇಗಲ್ ಠಾಣೆಯ ಪಿಎಸ್‌ಐ ಕು. ಐಶ್ವರ್ಯ ನಾಗರಾಳ ಹಾಗೂ ಪೊಲೀಸ್ ಇಲಾಖೆ ವಿವಿಧ ಅಧಿಕಾರಿಗಳು ಇದ್ದರು
–ಚಂದ್ರು ಎಂ. ರಾಥೋಡ್
