
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಪ್ರಗತಿ ಪರಿಶೀಲನೆ*
*ಮಕ್ಕಳು ದೇಶದ ಸಂಪತ್ತು, ರಕ್ಷಣೆ, ಆರೋಗ್ಯದೆಡೆಗೆ ಗಮನ ಹರಿಸಿ : ಕೆ.ನಾಗಣ್ಣಗೌಡ
*ಗದಗ : ಅಪೌಷ್ಟಿಕತೆ ಮಕ್ಕಳಿಗೆ ಸೂಕ್ತ ಆರೋಗ್ಯ ಚಿಕಿತ್ಸೆ ನೀಡುತ್ತಿಲ್ಲ. ಕಳೆದ ವರ್ಷ 518 ಗರ್ಭಿಣಿಯರು ಅಮೆನಿಯಾ ಕೊರತೆಯಿಂದ ಬಳಲುತ್ತಿದ್ದಾರೆ. ಆರೋಗ್ಯ ಜಾಗೃತಿ ಮೂಡಿಸದಿರುವು ಇದಕ್ಕೆ ಕಾರಣ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಬೇಸರ ವ್ಯಕ್ತಪಡಿಸಿದರು.ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜರುಗಿದ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಸೂಕ್ತ ನಿರ್ದೇಶನ ನೀಡಿದರು.ಮಕ್ಕಳು ಹಾಗೂ ಪರಿಸರ ಈ ದೇಶದ ಸಂಪತ್ತು. ಇವುಗಳ ರಕ್ಷಣೆ, ಆರೋಗ್ಯ ಸರಿಯಾಗಿರಲಿದೆ. ಇವುಗಳ ಆರೋಗ್ಯದ ಬಗ್ಗೆ ನಾವೆಲ್ಲರೂ ಕಾಳಜಿ ವಹಿಸೋಣ ಎಂದರು.ಎಲ್ಲ ಸರ್ಕಾರಿ ಕಟ್ಟಡ ಮೇಲೆ ಮಕ್ಕಳ ರಕ್ಷಣಾ ಸಹಾಯವಾಣಿ ಸಂಖ್ಯೆ 1098 ಬರೆಸಲೇಬೇಕು. ಹೊರ ರೋಗಿಗಳ ಚೀಟಿ, ಸರ್ಕಾರಿ ಎಲ್ಲ ದಾಖಲೆಗಳ ಕೆಳಗೆ ಬಾಲ್ಯ ವಿವಾಹ ಅಪರಾಧ ಎಂದು ಬರೆಸಲೇಬೇಕು ಎಂದು ಆಯೋಗದ ಅಧ್ಯಕ್ಷರು ಹೇಳಿದರು.ಮಕ್ಕಳ ನ್ಯಾಯ ಮತ್ತು ರಕ್ಷಣೆ ಬಗ್ಗೆ ಪೊಲೀಸ್ ಅಧಿಕಾರಿಗಳ ಜತೆ ಸಭೆಯಲ್ಲಿ ಚರ್ಚಿಸಲಾಯಿತು. ಮಕ್ಕಳ ಸಹಾಯವಾಣಿ 1098 ಮತ್ತು 112 ಸಂಖ್ಯೆ ಬರೆಸಬೇಕು. ಮಕ್ಕಳ ಹಕ್ಕುಗಳ ಬಗ್ಗೆ ಇಲಾಖೆ ಜಾಗೃತಿ ಮೂಡಿಸಬೇಕು ಎಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಕಳೆದ 3 ವರ್ಷದಲ್ಲಿ 110 ಕ್ಕೂ ಅಧಿಕ ಪೋಕ್ಸೊ ಪ್ರಕರಣ ದಾಖಲಾಗಿದೆ. 2021 ಮತ್ತು 22 ರಲ್ಲಿ 12 ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ. ಮಕ್ಕಳ ಕಳ್ಳತನ ಸಂಬಂಧಿಸಿದಂತೆ 2023-24 ಹಾಗೂ 2025 ರಲ್ಲಿ 43 ಪ್ರಕರಣ ಪತ್ತೆ ಹಚ್ಚಲಾಗಿದೆ. ಒಂದು ಮಗು ಪತ್ತೆ ಆಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.

ಪತ್ತೆ ಆಗದ ಮಗುವಿನ ಕುರಿತು ಆಯೋಗಕ್ಕೆ ವರದಿ ನೀಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದರು. ಮುಂಡರಗಿ ತಾಲೂಕಿನ ಹೈತಾಪುರ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ 5 ವರ್ಷದ ಮಗುವಿನ ಜತೆ ತಾಯಿ ಬಿದ್ದು ಸಾವನ್ನಪ್ಪಿದ ಕುರಿತು ಚರ್ಚಿಸಲಾಯಿತು. ಕೃಷಿಹೊಂಡದ ಸುತ್ತಲು ರಕ್ಷಣಾ ತಂತಿ ಬೇಲಿ ಹಾಕಲು ಸರ್ಕಾರ ಆದೇಶ ನೀಡಿದೆ. ಈ ಆದೇಶ ಇಲಾಖೆ ಕಡ್ಡಾಯ ಪಾಲಿಸಬೇಕು ಎಂದು ಆಯೋಗ ನಿರ್ದೇಶನ ನೀಡಿತು. ಕಳೆದ 5 ವರ್ಷದಿಂದ ಜಿಲ್ಲೆಯಲ್ಲಿ ಮಕ್ಕಳ ಅಸಹಜ ಸಾವು ಸಂಭವಿಸಿರುವ ಮಾಹಿತಿ ನೀಡಬೇಕು ಎಂದು ಆಯೋಗ ಒತ್ತಾಯಿಸಿತು. ಅಂಗನವಾಡಿ, ಶಾಲಾ ಸಮೀಪದಲ್ಲಿ ವಿದ್ಯುತ್ ತಂತಿ, ಹೈಟೆನ್ಷನ್ ಸಂಪರ್ಕ ಇರುವ ಬಗ್ಗೆ ವರದಿ ಸಿದ್ದಪಡಿಸಿ ಇಲಾಖೆಗೆ ಸಲ್ಲಿಸಬೇಕು ಮತ್ತು ತೆರವುಗೊಳಿಸಬೇಕು ಎಂದು ಅಧ್ಯಕ್ಷ ಕೆ ನಾಗಣ್ಣಗೌಡ ನಿರ್ದೇಶಿಸಿದರು

.ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 4311 ಹೈ ರಿಸ್ಕ ಪ್ರಗ್ನೆನ್ಸಿ ಕಂಡು ಬಂದಿದೆ. ಅಪೌಷ್ಟಿಕತೆ ಮಕ್ಕಳು ಜಿಲ್ಲೆಯಲ್ಲಿ 166 ಜನರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶೀಧರ ಕೊಸಂಬಿ ಮಾತನಾಡಿ, ಮಕ್ಕಳ ರಕ್ಷಣೆಯಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಅವುಗಳನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಹೇಳಿದರು.ಕಳೆದ ಸಾಲಿನಲ್ಲಿ 19 ವರ್ಷದ ಒಳಗಿನ 364 ಬಾಲಕಿಯರು ಗರ್ಭಿಣಿ ಆಗಿದ್ದಾರೆ. ಕಳೆದ 5 ವರ್ಷದಲ್ಲಿ 1176 ಬಾಲಕಿಯರು ಗರ್ಭಿಣಿ ಆಗಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಯವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿಲ್ಲ. ಕಾನೂನು ಕ್ರಮ ಏಕೆ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ಆರೋಗ್ಯ ಇಲಾಖೆಯ ಆರ್ ಸಿ ಎಚ್ ಅಧಿಕಾರಿಗಳು ಸರಿಯಾಗಿ ತಮ್ಮ ಕರ್ತವ್ಯ ನಿಭಾಯಿಸಿಲ್ಲ. ಬಾಲ ವಿವಾಹ, ಬಾಲ ಗರ್ಭಿಣಿ, ಟೀನೇಜ್ ಗರ್ಭಿಣಿ ಬಗ್ಗೆ ಸಭೆಗೆ ಸರಿಯಾಗಿ ಮಾಹಿತಿಯೊಂದಿಗೆ ಆಗಮಿಸಬೇಕು ಎಂದು ಶಶೀಧರ ಸೂಚಿಸಿದರು.ಸಭೆಯಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಮಕ್ಕಳ ರಕ್ಷಣೆ ಬಗ್ಗೆ ಚರ್ಚಿಸಲಾಯಿತು. ಗ್ರಾಪಂ ನಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ, ಸಭೆಯಲ್ಲಿ ನಡಾವಳಿ ಹೇಗೆ ಬರೆಯಬೇಕು ಎಂಬಿತ್ಯಾದಿ ವಿಷಯ ಸಭೆಯಲ್ಲಿ ಚರ್ಚಿಸಲಾಯಿತು. ಗ್ರಾಪಂ ನಲ್ಲಿ ಮಕ್ಕಳ ಹಕ್ಕುಗಳ ಸಭೆ ಜರುಗಿಸದ ಬಗ್ಗೆ ಆಯೋಗದ ಸದಸ್ಯರು ಬೇಸರ ವ್ಯಕ್ತಪಡಿಸಿದರು. ಗ್ರಾಮಗಳಲ್ಲಿ ವಿಕಲಚೇತನ ಮಕ್ಕಳಿಗೆ ಇಲಾಖೆಯಿಂದ ಕಾರ್ಡ ಸಿಕ್ಕಿಲ್ಲ. ಪೋಷಕರಿಗೆ ಮಾಹಿತಿ ಕೊರತೆಯಿಂದ ಇಲಾಖೆ ಸೌಲಭ್ಯ ಪಡೆಯುವ ಕಾರ್ಡ ಸಿಗುತ್ತಿಲ್ಲ ಎಂದು ಆಯೋಗದ ಸದಸ್ಯ ಡಾ. ಕೆ.ಟಿ. ತಿಪ್ಪೆಸ್ವಾಮಿ ಕಿಡಿಕಾರಿದರು.ಶಿಕ್ಷಣ ಇಲಾಖೆಯಲ್ಲಿ ಮಕ್ಕಳ ಶಿಕ್ಷಣ, ರಕ್ಷಣೆ ಬಗ್ಗೆ ನಡೆಯುತ್ತಿರುವ ಕೆಲಸಗಳ ಬಗ್ಗೆ ಚರ್ಚಿಸಲಾಯಿತು. ಶಾಲೆಗಳಲ್ಲಿ ಮಕ್ಕಳ ಸಲಹಾ ಪೆಟ್ಟಿಗೆ ಹಾಕಲಾಗುತ್ತಿಲ್ಲ. ಖಾಸಗಿ ಶಾಲಾ ವಾಹನಗಳಲ್ಲಿ ಸಿಸಿ ಕೆಮಾರಾ, ಜಿಪಿಎಸ್ ಟ್ರ್ಯಾಕರ್ ಹಾಗೂ ಚಾಲಕನ ಮಾಹಿತಿ ಕುರಿತು ಪೊಲೀಸ್ ವೆರಿಫಿಕೇಷನ್ ಮಾಡಿರುವ ದಾಖಲೆಗಳನ್ನು ಹೊಂದಿರಬೇಕು. ಶಾಲೆಗಳಲ್ಲಿ ಹೊರಗುತ್ತಿಗೆ ಸಿಬ್ಬಂದಿಯ ಪೊಲೀಸ್ ವೆರಿಫೀಕೇಷನ್ ಆಗಬೇಕು. ಆದರೆ ಇವೆಲ್ಲವೂ ಖಾಸಗಿ ಶಾಲಾ ವಾಹನಗಳಲ್ಲಿ ಕಂಡು ಬಂದಿಲ್ಲ ಎಂದು ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಆರೋಪಿಸಿದರು. ವಿಕಲಚೇತನ 2002 ಮಕ್ಕಳು, ದೃಷ್ಟಿದೋಷ 462, ಚರ್ಮರೋಗದಿಂದ 31672 ಮಕ್ಕಳು ಜಿಲ್ಲೆಯಲ್ಲಿ ಬಳಲುತ್ತಿದ್ದಾರೆ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳು ಹೇಳಿದರು.ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಮಾತನಾಡಿ, ಆಯೋಗವು ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸಭೆನಡೆಸಿದೆ. ಅಲ್ಲಿನ ಅನುಭವಗಳು, ಸಮಸ್ಯೆಗಳು ಹಾಗೂ ನಿವಾರಣೆ ಹೇಗೆ ಎಂದು ವಿವರವಾಗಿ ತಿಳಿಸಿದ್ದಾರೆ. ಗದಗ ಜಿಲ್ಲೆಯಲ್ಲಿ ಆಯೋಗದ ಸೂಚನೆಯಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವರು ಎಂದು ಬರವಸೆ ಕೊಟ್ಟರು.ಇದೇ ಸಂದರ್ಭದಲ್ಲಿ ಜಾಗೃತಿ ಕತಪತ್ರ, ನೂತನ ಲೋಗೊ ಬಿಡುಗಡೆಯನ್ನು ಮಾಡಲಾಯಿತು.

ಸಭೆಯಲ್ಲಿ ಆಯೋಗದ ಸದಸ್ಯರಾದ ಶಶೀಧರ ಕೊಸಂಬಿ, ಶೇಖರಗೌಡ ರಾಮತ್ನಾಳ, ಡಾ. ಕೆ. ಟಿ. ತಿಪ್ಪೇಸ್ವಾಮಿ, ಜಿಪಂ ಉಪಕಾರ್ಯದರ್ಶಿ ಸಿ ಆರ್ ಮುಂಡರಗಿ, ಡಿವೈಎಸ್ಪಿ ಮಹಾಂತೇಶ ಸಜ್ಜನರ, ಶ್ರೀಮತಿ ಜಯದೇವಿ ಇತರರು ಇದ್ದರು.*ಆಯೋಗದ ಇತರೆ ನಿರ್ದೇಶನ** ಶಾಲಾ ಮಕ್ಕಳಿಗ ಬಸ್ ಸೂಕ್ತವಾಗಿ ವ್ಯವಸ್ಥೆ ನೀಡಬೇಕು.* ಚಾಲಕ, ನಿರ್ವಾಹಕರ ಮೇಲೆ ದೂರುಗಳು ಬರುತ್ತಿದ್ದು, ಕ್ರಮ ಕೈಗೊಳ್ಳಬೇಕು.* ಶಾಲೆಗಳಲ್ಲಿ ಮಕ್ಕಳ ರಕ್ಷಣೆ ಮತ್ತು ಹಕ್ಕುಗಳ ಬಗ್ಗೆ ಅರಿವು ಕಾರ್ಯಕ್ರಮವಾಗಲಿ.* ಗ್ರಾಪಂ ಗಳಲ್ಲಿ ಮಕ್ಕಳ ಶಿಕ್ಷಣ ಕಾರ್ಯಾಗಾರ.* ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಎಲ್ಲ ಇಲಾಖೆಗಳ ಕರ್ತವ್ಯ.* ಮಕ್ಕಳ ರಕ್ಷಣಾ ಘಟಕ ತನ್ನ ಕಾರ್ಯವ್ಯಾಪ್ತಿ ಸಮರ್ಪಕಗೊಳಿಸಬೇಕು
