ಬೆಂಗಳೂರು : ಇನ್ನು ಮುಂದೆ ಬಸ್‌ನಲ್ಲಿ ಪ್ರಯಾಣ ಮಾಡುವಾಗ ಆಧಾರ್ (ಆಧಾರ್ ಕಾರ್ಡ್ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಶಕ್ತಿ ಯೋಜನೆಯ ಲಾಭವನ್ನು ಇನ್ನಷ್ಟು ಸರಳವಾಗಿ ಪಡೆಯಲು ಸರ್ಕಾರ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವ ನಿರ್ಧಾರ ಕೈಗೊಂಡಿದೆ.
ಈ ಸ್ಮಾರ್ಟ್ ಕಾರ್ಡ್‌ನ್ನು ಎರಡು ತಿಂಗಳೊಳಗೆ ರಾಜ್ಯದ ಎಲ್ಲಾ ಅರ್ಹ ಮಹಿಳೆಯರಿಗೆ ಉಚಿತವಾಗಿ ನೀಡಲಾಗುವುದು. ಈಗಾಗಲೇ ಈ ಕುರಿತ ಕಡತ ಹಣಕಾಸು ಇಲಾಖೆಗೆ ಹೋಗಿದ್ದು, ಕೇವಲ ಅನುಮತಿಯ ಬಾಕಿಯಿದೆ. ಸಾರಿಗೆ ಇಲಾಖೆ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಂಡಿದೆ.
ಸ್ಮಾರ್ಟ್ ಕಾರ್ಡ್ ಪಡೆಯಲು ಮಹಿಳೆಯರು ‘ಗ್ರಾಮ ಒನ್’ ಅಥವಾ ‘ಬೆಂಗಳೂರು ಒನ್’ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬೇಕು. ಅಲ್ಲದೆ, ಸೇವಾಸಿಂಧು ವೆಬ್‌ಸೈಟ್ ಬಳಸಿ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಿದ ನಂತರ ತಕ್ಷಣವೇ ಪ್ರಿಂಟ್ ಮಾಡಿದ ರಸೀದಿಯೇ ಸ್ಮಾರ್ಟ್ ಕಾರ್ಡ್ ಎಂದು ಪರಿಗಣಿಸಲಾಗುತ್ತದೆ. ಮಾಸಿಕ ಪಾಸ್ ಅಥವಾ ಕಾರ್ಡ್ ವಿತರಣೆ ಇಲ್ಲ. ಇದು ಶಾಶ್ವತ ಪಾಸ್‌ನಂತೆ ಕಾರ್ಯನಿರ್ವಹಿಸುತ್ತದೆ.
ಸೇವಾಸಿಂಧು ವೆಬ್‍ಸೈಟ್ ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ. ಆಧಾರ್ ಕಾರ್ಡ್‍ನ್ನು ದಾಖಲೆಯಾಗಿ ಪರಿಗಣಿಸಿ ರಾಜ್ಯದ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗತ್ತದೆ. ಸೇವಾಕೇಂದ್ರದಲ್ಲಿಯೇ ಸ್ಮಾರ್ಟ್‍ಕಾರ್ಡ್ ಪ್ರಿಂಟ್ ಹಾಕಲಾಗುತ್ತದೆ. ಈ ಸ್ಮಾರ್ಟ್ ಕಾರ್ಡ್ ಅನ್ನು ಕೇವಲ ಕರ್ನಾಟಕದ ನಿವಾಸಿಗಳಿಗಷ್ಟೇ ನೀಡಲಾಗುತ್ತದೆ. ಆಧಾರ್ ಕಾರ್ಡ್‌ನ ವಿಳಾಸ ಕರ್ನಾಟಕದೊಳಗೇ ಇರಬೇಕು. ಶಕ್ತಿ ಯೋಜನೆಯ ಲಾಭ ಪಡೆಯಲು ಕೆಲವರು ಆಧಾರ್ ವಿಳಾಸ ಬದಲಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಆದರೆ ವಿಳಾಸ ಬದಲಿಸಿ ಸ್ಮಾರ್ಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದರೆ ಅದು ಅಂಗೀಕಾರವಾಗುವುದಿಲ್ಲ.