
ಶಿಡ್ಲಘಟ್ಟ : ಪುರಾತತ್ವ ಇಲಾಖೆಯಿಂದ ತಾಲ್ಲೂಕಿನ ಗ್ರಾಮಾವಾರು ಸರ್ವೆ ನಡೆಸುತ್ತಿರುವುದು ಸ್ವಾಗತಾರ್ಹ ಮುಂದಿನ ಪೀಳಿಗೆಗೆ ಕ್ಷೇತ್ರದ ಐತಿಹಾಸಿಕ ಇತಿಹಾಸಗಳನ್ನು ಹೇಳಬೇಕಿದೆ ಎಂದು ಶಾಸಕರಾದ ಬಿ.ಎನ್.ರವಿಕುಮಾರ್ ತಿಳಿಸಿದರು.

ಪುರಾತತ್ವ ಇಲಾಖೆಯಿಂದ ತಾಲ್ಲೂಕಿನ ಗ್ರಾಮಾವಾರು ಸರ್ವೆಗಾಗಿ ಆಗಮಿಸಿದ್ದ ಶಾಸನತಜ್ಞ ಕೆ.ಧನಪಾಲ್ ಮತ್ತು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಅವರು ಶಾಸಕರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ ಇತಿಹಾಸವನ್ನು ಅರಿಯಲು ಶಾಸನಾಧ್ಯಯನ ಬಹಳ ಮುಖ್ಯವಾದದ್ದು ಹಳ್ಳಿಗಳಲ್ಲಿ ಸಾಕಷ್ಟು ಹಳೆಯ ಕಲ್ಲುಗಳನ್ನು ನೋಡುತ್ತೇವಾದರೂ ಅವುಗಳ ಮಹತ್ವ ಎಲ್ಲರಿಗೂ ಗೊತ್ತಿರುವುದಿಲ್ಲ ಪುರಾತತ್ವ ಇಲಾಖೆಯಿಂದ ನಡೆಸುತ್ತಿರುವ ಈ ಸರ್ವೆ ಕಾರ್ಯ ಸಂಪೂರ್ಣವಾದ ನಂತರ ಇಡೀ ಕ್ಷೇತ್ರದಲ್ಲಿ ಸಿಕ್ಕಿರುವ ಶಾಸನಗಳ ವಿಚಾರವನ್ನು ಪ್ರಕಟಿಸಬೇಕೆಂದು ಅವರು ಹೇಳಿದರು.
ಶಾಸನತಜ್ಞ ಕೆ.ಧನಪಾಲ್ ಮಾತನಾಡಿ, ನಾವುಗಳು ಶಿಡ್ಲಘಟ್ಟ ಗ್ರಾಮಾವಾರು ಸರ್ವೆ ಮಾಡುವಾಗ ಹಲವಾರು ಅಪರೂಪದ ಶಾಸನ ಮತ್ತು ವೀರಗಲ್ಲುಗಳನ್ನು ನೋಡುತ್ತಿದ್ದೇವೆ ಅವುಗಳನ್ನು ಫೋಟೋ ಮತ್ತು ವೀಡಿಯೋ ಮೂಲಕ ದಾಖಲಿಸುತ್ತಾ, ಅವುಗಳ ಮೇಲೆ ಕೆತ್ತಿರುವ ಅಕ್ಷರಗಳನ್ನು ತಜ್ಞರಿಗೆ ಕಳುಹಿಸಿ ಓದಿಸುತ್ತಿದ್ದೇವೆ ಗಂಗ, ನೊಳಂಬ, ಚೋಳ, ಹೊಯ್ಸಳ, ವಿಜಯನರದ ಅರಸರ ಕಾಲದ ಇತಿಹಾಸದ ಸಂಗತಿಗಳು ತಿಳಿಯುತ್ತಿವೆ ಎಂದರು.
ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಇವುಗಳ ಮಹತ್ವವನ್ನು ತಿಳಿಸಿದ್ದೇವೆ ಗ್ರಾಮಸ್ಥರಲ್ಲಿಯೂ ಈ ಶಾಸನಗಳು ಮತ್ತು ವೀರಗಲ್ಲುಗಳನ್ನು ಉಳಿಸುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಮೇಲೂರಿನಲ್ಲಿರುವ ಆವತಿ ನಾಡಪ್ರಭು ಗೋಪಾಲಗೌಡರ ದಾನ ಶಾಸನ (ಕ್ರಿ.ಶ. 1698) ದ ಪಠ್ಯವನ್ನು ಮುದ್ರಿಸಿರುವ ಭಿತ್ತಿಪತ್ರವನ್ನು ಶಾಸಕ ಬಿ.ಎನ್.ರವಿಕುಮಾರ್ ಅವರಿಗೆ ಪುರಾತತ್ವ ಇಲಾಖೆಯ ಪರವಾಗಿ ಶಾಸನತಜ್ಞ ಕೆ.ಧನಪಾಲ್ ಅವರು ನೀಡಿದರು.