ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಜಿ ಸ್ಪೀಕರ್ ಕೃಷ್ಣ ಪ್ರಶಸ್ತಿ ಪ್ರಧಾನ

*ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಜಿ ಸ್ಪೀಕರ್ ಕೃಷ್ಣ ಪ್ರಶಸ್ತಿ ಪ್ರಧಾನ

ಮಾಡಿದ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್*.ತಮ್ಮ 40 ವರ್ಷಗಳ ಸುಧೀರ್ಘ ರಾಜಕಾರಣ ಜೀವನದಲ್ಲಿ ಸರಳವಾಗಿ ಶಿಸ್ತು ಬದ್ಧ ಜೀವನ ನಡೆಸಿ, ಕಲುಷಿತಗೊಂಡಿರುವ ಇಂದಿನ ಕೆಟ್ಟ ರಾಜಕಾರಣಕ್ಕೆ ಹಾಗೂ ನಾಗರಿಕ ಸಮಾಜಕ್ಕೆ ಮಾದರಿಯಾಗಿರುವ ಮಂಡ್ಯದ ಗಾಂಧಿ ಮಾಜಿ ಸ್ಪೀಕರ್ ಕೃಷ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ವಿಶೇಷ ವಾಗಿದೆ ಎಂದು ಆಳಂದ್ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್. ಪಾಟೀಲ್ ಅಭಿಮಾನದಿಂದ ಹೇಳಿದರು.

ಅವರು ಇಂದು ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಟಾನವು ಕೃಷ್ಣ ಅವರ 85ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ನಾಡಿನ ವಿವಿಧ ಸಾಧಕರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ ಹಾಗೂ ಅತೀ ಹೆಚ್ಚಿನ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಕೃಷ್ಣ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿ ಗೌರವಿಸಿ ಮಾತನಾಡಿದರು.ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಬಡ ಜನರ ಬಗ್ಗೆ ಕಾಳಜಿ ವಹಿಸದೇ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಾ ನೈತಿಕವಾಗಿ ದಿವಾಳಿತನವನ್ನು ಪ್ರದರ್ಶನ ಮಾಡಿ ತನ್ನತನವನ್ನು ಕಳೆದುಕೊಂಡಿವೆ. ರಿಯಲ್ ಎಸ್ಟೇಟ್ ಕುಳಗಳು, ಶ್ರೀಮಂತರು, ಹಾಗೂ ಗಣಿ ಧಣಿಗಳು ಸೇರಿದಂತೆ ಪಟ್ಟಭದ್ರ ಹಿತಾಸಕ್ತಿಗಳನ್ನು ಓಲೈಕೆ ಮಾಡುತ್ತಾ ಹಣಬಲ ಹಾಗೂ ತೋಳ್ಬಲದಿಂದ ಅಧಿಕಾರವನ್ನು ಹಿಡಿಯಲು ರಹದಾರಿ ನೀಡುತ್ತಿವೆ. ಇಂದಿನ ರಾಜಕಾರಣಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ತತ್ವ ಸಿದ್ಧಾಂತಗಳು ಕಣ್ಮರೆಯಾಗುತ್ತಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಬಡವರು ಹಾಗೂ ಮಧ್ಯಮ ವರ್ಗದ ಜನರು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಬೇಕೆಂದು ಆಸೆ ಪಟ್ಟವರು ಶಾಸನ ಸಭೆ ಪ್ರವೇಶಿಸಿ, ಶಾಸಕರಾಗುವುದಿರಲಿ, ಕೊನೆಗೆ ಗ್ರಾಮ ಪಂಚಾಯಿತಿಯ ಸದಸ್ಯರಾಗಲು ಸಹ ಸಾಧ್ಯವಾಗುವುದಿಲ್ಲ. ನೂರಾರು ಕೋಟಿ ರೂಪಾಯಿ ಹಣವನ್ನು ನೀರಿನಂತೆ ಖರ್ಚು ಮಾಡಿ ಶಾಸಕರಾಗಿ ಆಯ್ಕೆಯಾಗಲು ನನ್ನಂಥವರಿಂದ

ಸಾಧ್ಯವಾಗುವುದಿಲ್ಲ, ಆದ್ದರಿಂದ ನಾನು ಇನ್ನು ಮುಂದೆ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡದಿರಲು ನಿರ್ಧರಿಸಿದ್ದೇನೆ. ನನ್ನ ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಜನರ ಮುಂದೆ ಹೇಳಿಕೊಂಡಿದ್ದೇನೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ, ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸರ್ಕಾರದಲ್ಲಿ ಕೆಲವು ಸಚಿವರು ಜನಪರವಾಗಿ ಕೆಲಸ ಮಾಡದೆ ಸ್ವಾರ್ಥ ಸಾಧನೆ ಮಾಡುತ್ತಿದ್ದಾರೆ, ನಾನು ನನ್ನ ಮನಸ್ಸಿನ ಭಾವನೆಗಳನ್ನು ನೇರವಾಗಿ ಯಾವುದೇ ಮುಚ್ಚು ಮರೆ ಇಲ್ಲದೆ ಹೇಳಿದ್ದೇನೆ, ಇದೇ ಮಾತನ್ನು ಕಾಂಗ್ರೆಸ್ ರಾಜ್ಯ ಉಸ್ತುವಾರಿಗಳಾದ ರಣಜಿತ್ ಸಿಂಗ್ ಸುರ್ಜೆವಾಲಾ ಅವರಿಗೂ ತಿಳಿಸಿದ್ದೇನೆ ಎಂದು ತಿಳಿಸಿದ ಬಿ. ಆರ್.ಪಾಟೀಲ್ ನಾನು ಕಂಡಂತೆ ರಾಜಕಾರಣದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದವರೆಂದರೆ ಮಾಜಿ ವಿಧಾನಸಭಾಧ್ಯಕ್ಷರಾದ ಕೆ.ಆರ್. ಪೇಟೆ ಕೃಷ್ಣ ಹಾಗೂ ಬಿ.ಜಿ. ಬಣಕಾರ್ ಅವರು ಮಾತ್ರ. ತಮ್ಮ 40 ವರ್ಷಗಳ ಸುದೀರ್ಘ ರಾಜಕಾರಣ ಜೀವನದಲ್ಲಿ ಶಾಸಕರಾಗಿ ಸಚಿವರಾಗಿ ಲೋಕಸಭಾ ಸದಸ್ಯರಾಗಿ ರಾಜ್ಯ ವಿಧಾನಸಭಾ ಅಧ್ಯಕ್ಷರಾಗಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ ಕೃಷ್ಣ ಅವರು ನುಡಿದಂತೆ ನೇರವಾಗಿ ನಡೆಯುವ ಗಾಂಧಿಗಿರಿಯನ್ನು ಮೈಗೂಡಿಸಿಕೊಂಡಿರುವ ಸರಳ ಸಜ್ಜನ ರಾಜಕಾರಣಿಯಾಗಿದ್ದಾರೆ. ಕೆ ಆರ್ ಪೇಟೆ ಕೃಷ್ಣ ಪ್ರತಿಷ್ಠಾನವು ಹಮ್ಮಿಕೊಂಡಿರುವ ಇಂದಿನ ಜನಪರ್ವಾದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೃಷ್ಣ ಅವರ ಅಭಿಮಾನಿಗಳು ಭಾಗವಹಿಸಿರುವುದೇ ಈ ಕಾರ್ಯಕ್ರಮದ ಸಾರ್ಥಕತೆಯ ಪ್ರತಿಬಿಂಬವಾಗಿದೆ ಎಂದು ಅಭಿಮಾನದಿಂದ ಬಿ.ಆರ್. ಪಾಟೀಲ್ ಹೇಳಿದರು

.ಕರ್ನಾಟಕ ಜಾನಪದ ಪರಿಷತ್ ಮಾಜಿ ಅಧ್ಯಕ್ಷ ಹಾಗೂ ವಿಚಾರವಾದಿಗಳು ಚಿಂತಕರಾದ ಪ್ರೊಫೆಸರ್ ಕಾಳೇಗೌಡ ನಾಗವಾರ ಅವರು ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ವಿಚಾರವಾದಿಗಳಾದ ಲೋಹಿಯಾ, ಜಯಪ್ರಕಾಶ್ ನಾರಾಯಣ್, ಮಹಾತ್ಮ ಗಾಂಧೀಜಿ, ಭಗವಾನ್ ಬುದ್ಧ, ಬಸವಣ್ಣ, ಅಕ್ಕ ಮಹಾದೇವಿ ಹಾಗೂ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಜೀವನದ ಆದರ್ಶಗಳು ಹಾಗೂ ತತ್ವ ಸಂದೇಶಗಳನ್ನು ಪಾಲಿಸುವ ಕೃಷ್ಣ ಅವರಂತಹ ರಾಜಕಾರಣಿಗಳು ಹಿಂದಿನ ರಾಜಕೀಯ ರಂಗದಲ್ಲಿ ವಿರಳವಾಗುತ್ತಿದ್ದಾರೆ. ಮಾಜಿ ಸ್ಪೀಕರ್ ಕೃಷ್ಣ ಅವರ ಸಹಪಾಠಿಗಳಾದ ಬಿ.ಆರ್ ಪಾಟೀಲ್ ಅವರು ಕೂಡಾ ಮಂಡ್ಯದ ಗಾಂಧಿ ಕೃಷ್ಣ ಅವರಂತೆಯೇ ಪ್ರಾಮಾಣಿಕ, ನಿಷ್ಠಾವಂತ, ಜನಪರವಾದ ಕಾಳಜಿ ಹೊಂದಿರುವ ರಾಜಕಾರಣಿಗಳಾಗಿದ್ದು ಭ್ರಷ್ಟಾಚಾರ ಹಾಗೂ ಸಮಾಜಘಾತಕ ಶಕ್ತಿಗಳ ವಿರುದ್ಧ ನೇರವಾಗಿ ಮಾತನಾಡಿ ಖಂಡಿಸುವ ಎದೆಗಾರಿಕೆಯನ್ನು ಹೊಂದಿರುವ ಅಪರೂಪದ ರಾಜಕಾರಣಿಗಳಾಗಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಭ್ರಷ್ಟಾಚಾರ ನಡೆಸುವ ಜನರ ವಿರುದ್ಧ ಸಂಘಟಿತ ಹೋರಾಟ ನಡೆಸುವ ಯುವಜನರು ಹಿಂದಿನ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದ್ದಾರೆ. ಎಂದು ಕೃಷ್ಣ ಪ್ರತಿಷ್ಠಾನವು ನಡೆಸುತ್ತಿರುವ ಸರಳ ಕಾರ್ಯಕ್ರಮವು ಸಮಾಜಕ್ಕೆ ಸಂದೇಶವನ್ನು ನೀಡುವ ಕಾರ್ಯಕ್ರಮವಾಗಿದ್ದು

ಈ ಕಾರ್ಯಕ್ರಮದಲ್ಲಿ ಅತ್ಯಂತ ಸಂತೋಷದಿಂದ ಭಾಗಿಯಾಗಿದ್ದೇ ನೆ ಎಂದು ಕಾಳೇಗೌಡ ನಾಗವಾರ ಹೇಳಿದರು.ಕೆ.ಆರ್.ಪೇಟೆ ಪುರಸಭಾ ಅಧ್ಯಕ್ಷ ಪಂಕಜ ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಮಾಜಿ ಸ್ಪೀಕರ್ ಕೃಷ್ಣ ಅವರ ಧರ್ಮಪತ್ನಿ ಪ್ರೊ.ಇಂದ್ರಮ್ಮ, ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೆ ಹೊಸಳ್ಳಿ ಜವರಾಯಿಗೌಡ, ಕಾರ್ಯದರ್ಶಿ ಕತ್ತರಘಟ್ಟ ವಾಸು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕರು ಹಾಗೂ ಸಂಘಟಕರಾದ ಅಂಚಿ. ಸಣ್ಣಸ್ವಾಮಿಗೌಡ, ಉಪಾಧ್ಯಕ್ಷ ಕೆ ಟಿ ಚಂದ್ರೇಗೌಡ ಸಹಕಾರಿದರ್ಶಿ ಕೆ.ಮಂಜುಳಾ ನಿರ್ದೇಶಕರಾದ ಬಿ. ಜವರಾಯಿಗೌಡ, ಚೆನ್ನಿಂಗೇಗೌಡ ಶೀಳನೆರೆ ಅಂಬರೀಶ್ ಎಂ.ಬಿ. ಹರೀಶ್, ಎಸ್.ಎಲ್.ಮೋಹನ, ಆಲೆನಹಳ್ಳಿ ಜಯರಾಜ್ ಐಚನಹಳ್ಳಿ ಶಿವಣ್ಣ, ರಾಯ ಸಮುದ್ರ ಶಿವರಾಮೇಗೌಡ, ಹಾದನೂರು ಪರಮೇಶ್, ಹೆಮ್ಮನಹಳ್ಳಿ ರಮೇಶ್, ಸಂತೆ ಬಾಚಹಳ್ಳಿ ನಾಗರಾಜು ಮತ್ತಿತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಶ್ರಾಂತರಾಧ್ಯಾಪಕ ಪ್ರಾಪ್ಸರ್ ಕಾಳೇಗೌಡ ನಾಗವಾರ ರೈತ ಮುಖಂಡ ಎಂ ವಿ ರಾಜೇಗೌಡ ಕಿಕ್ಕೇರಿಯ ಖ್ಯಾತ ವೈದ್ಯರಾದ ಡಾಕ್ಟರ್ ಕೃಷ್ಣ ಹಾಗೂ ಪ್ರಗತಿಪರ ರೈತ ವಿಠಲಾಪುರ ಸುಬ್ಬೆಗೌಡ ಅವರಿಗೆ ಮಾಜಿ ಸ್ಪೀಕರ್ ಕೃಷ್ಣ ಪ್ರಶಸ್ತಿ, ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕೃಷ್ಣ ಪ್ರಶಸ್ತಿಯೊಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

*ವರದಿ.ಡಾ. ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ ಮಂಡ್ಯ* .

Leave a Reply

Your email address will not be published. Required fields are marked *