ಕುವೆಂಪು ಸಾಹಿತ್ಯದಲ್ಲಿ ವೈಜ್ಞಾನಿಕತೆ, ಮಾನವೀಯತೆ ತುಂಬಿದೆ: ಪ್ರಾಧ್ಯಾಪಕ ಸಿದ್ರಾಮಪ್ಪ ಬಣಗಾರ

ಕುವೆಂಪು ಸಾಹಿತ್ಯದಲ್ಲಿ ವೈಜ್ಞಾನಿಕತೆ, ಮಾನವೀಯತೆ ತುಂಬಿದೆ: ಪ್ರಾಧ್ಯಾಪಕ ಸಿದ್ರಾಮಪ್ಪ ಬಣಗಾರ

ಅಫಜಲಪುರ: “ಕುವೆಂಪು ಸಾಹಿತ್ಯ ಪರಿಸರ, ಬದುಕು, ಸತ್ಯ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ್ದು. ಅವರ ಕೃತಿಗಳನ್ನು ಓದಿದರೆ ಅದು ವಿಜ್ಞಾನ ಓದಿದಂತೆಯೇ ಆಗುತ್ತದೆ.

ಮಲೆನಾಡಿನ ಕವಿಯಾದ ಕುವೆಂಪು, ಮಳೆಯಾಶ್ರಿತ ಜನಾಂಗದ ಬದುಕನ್ನು ಸಾಹಿತ್ಯದ ಮೂಲಕ ಶಾಶ್ವತವಾಗಿ ಪ್ರತಿಬಿಂಬಿಸಿದ್ದಾರೆ. ಹೀಗಾಗಿ ಕುವೆಂಪು ಸಾಹಿತ್ಯ ಅಧ್ಯಯನದಿಂದ ಸಮಾಜದಲ್ಲಿ ವೈಜ್ಞಾನಿಕತೆ, ಮಾನವೀಯತೆ ಮತ್ತು ವೈಚಾರಿಕ ಮನೋಭಾವ ಬಲವಾಗಿ ಬೆಳೆಸಬಹುದು” ಎಂದು ಕಲಬುರಗಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಸಿದ್ರಾಮಪ್ಪ ಬಣಗಾರ ಅಭಿಪ್ರಾಯಪಟ್ಟರು.ಅವರು ಪಟ್ಟಣದ ಮಹಾಂತೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಅಫಜಲಪುರ ಘಟಕದ ವತಿಯಿಂದ ಬರಗೂರು ರಾಮಚಂದ್ರಪ್ಪ ಸಂಪಾದಿತ “ಕುವೆಂಪು ವಿಚಾರ ಕ್ರಾಂತಿ” ಕೃತಿಯ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.ಈ ಸಂದರ್ಭದಲ್ಲಿ ನಿವೃತ್ತ ಡಿಡಿಪಿಐ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಶಿವಶರಣಪ್ಪ ಮೂಳೆಗಾಂವ ಅವರು –“ಧಾರ್ಮಿಕ ಹಾಗೂ ಸಾಮಾಜಿಕ ಮೌಢ್ಯಗಳು ಜನರ ಬದುಕನ್ನು ಹಾಳುಮಾಡುತ್ತಿವೆ. ಸತ್ಯ ಹೇಳಿದರೆ ನಂಬದ ಜನ, ಸುಳ್ಳನ್ನು ಬೇಗ ನಂಬಿ ಆಚರಣೆ ಮಾಡುವರು. ಇಂತಹ ಸಂದರ್ಭಗಳಲ್ಲಿ ಕುವೆಂಪು ಸಾಹಿತ್ಯದಿಂದ ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವ ಮೂಡಿಸುವುದು ಅತಿ ಮುಖ್ಯ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾಂತೇಶ್ವರ ಶಿಕ್ಷಣ ಸಂಸ್ಥೆಯ ಕೋಶಾಧಿಕಾರಿ ಸದಾಶಿವ ಮೇತ್ರಿ ಅವರು –“ಮೌಢ್ಯ ಹರಡುವವರ ವಿರುದ್ಧ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕೆಲಸ ಭಾರತ ಜ್ಞಾನ ವಿಜ್ಞಾನ ಸಮಿತಿ ಮಾಡುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳನ್ನು ಸಂಸ್ಥೆಯಲ್ಲಿ ನಿರಂತರ ನಡೆಸಲು ಅವಕಾಶ ನೀಡುತ್ತೇವೆ” ಎಂದು ತಿಳಿಸಿದರು.ಭಾರತ ಜ್ಞಾನ ವಿಜ್ಞಾನ ಸಮಿತಿ ಖಜಾಂಚಿ ರಾಹುಲ್ ಜೀ ದೊಡ್ಮನಿ ಆಶಯ ನುಡಿಗಳಲ್ಲಿ –“ಕುವೆಂಪು ಅವರ ಸಾಹಿತ್ಯದ ಗಟ್ಟಿ ಬೀಜ ಸಮಾಜದಲ್ಲಿ ಮೊಳಕೆ ಹೊಡೆಯಲಿ. ಇತ್ತೀಚೆಗೆ ಕುವೆಂಪು ಅವರಿಗೆ ಮರಣೋತ್ತರ ‘ಭಾರತ ರತ್ನ’ ನೀಡುವಂತೆ ರಾಜ್ಯ ಸರ್ಕಾರ ಶಿಫಾರಸು ಸಲ್ಲಿಸಿರುವುದು ಸಾಹಿತ್ಯಾಸಕ್ತರಲ್ಲಿ ಹರ್ಷ ಮೂಡಿಸಿದೆ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಈ ಗೌರವ ನೀಡಲಿ” ಎಂದು ಅಭಿಪ್ರಾಯಪಟ್ಟರು.

ಹಿರಿಯ ಸಾಹಿತಿ ಅಬ್ಬಾಸ್ ಅಲಿ ನದಾಫ್ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೆ. ನಾರಾಯಣ, ಡಾ. ರಾಜೇಶ್ ಆಲಮೇಲಕರ್, ಬಿಜಿವಿಎಸ್ ತಾಲೂಕು ಅಧ್ಯಕ್ಷ ರವಿಚಂದ್ರ ಅತನೂರ, ಸಿದ್ದಣ್ಣಗೌಡ ಪಾಟೀಲ್, ಗೋಪಾಲ ಹಳ್ಯಾಳ, ಅಶೋಕ ತಂಬಾಕೆ, ರವಿ ಗೌರ, ರಾಹುಲ್ ಸಿಂಗೆ, ಗುರು ಚಾಂದಕವಟೆ, ಶರಣಯ್ಯ ಹಿರೇಮಠ, ಡಿ.ಎಂ. ನದಾಫ್, ಭೀಮಣ್ಣ ಬೋನಾಳ, ಸತೀಶ ನಿಲಂಗಿ ಡಾ.ಸಂಗಣ್ಣ ಸಿಂಗೆ, ನೆರವು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಸಿದ್ದರಾಮ ಶಿವಣಗಿ ಸೇರಿದಂತೆ ಅನೇಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಾರ್ಯಕ್ರಮವನ್ನು ಭಾರತ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಉಪಾಧ್ಯಕ್ಷ ಲಕ್ಷ್ಮಣ ನಡುವಿನಕೇರಿ ನಿರೂಪಿಸಿದರು. ಅಧ್ಯಕ್ಷ ರವಿಚಂದ್ರ ಅತನೂರ ಧನ್ಯವಾದ ತಿಳಿಸಿದರು.

Leave a Reply

Your email address will not be published. Required fields are marked *