
ಭೂ ವೈಕುಂಠವೆಂದೇ ಪ್ರಸಿದ್ಧವಾಗಿರುವ ಕೃಷ್ಣ ರಾಜಪೇಟೆ ತಾಲೂಕಿನ ಹೇಮಾವತಿ ನದಿಯ ದಂಡೆಯಲ್ಲಿರುವ ಕಲ್ಲಹಳ್ಳಿಯ ಭೂವರಹನಾಥ ಕ್ಷೇತ್ರದಲ್ಲಿ ಅಮಾವಾಸ್ಯೆಯ ಅಂಗವಾಗಿ ಭೂದೇವಿ ಸಮೇತ ಶ್ರೀಲಕ್ಷ್ಮೀ ವರಹನಾಥ ಸ್ವಾಮಿಗೆ ಮಹಾ ನೀವೇಧನೆ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ನಡೆಯಿತು.ವಿಶ್ವದಲ್ಲಿಯೇ ಅಪರೂಪದ 17ಅಡಿ ಎತ್ತರದ ಬೃಹತ್ ಸಾಲಿಗ್ರಾಮ ಶ್ರೀ ಕೃಷ್ಣ ಶಿಲೆಯಿಂದ ನಿರ್ಮಿಸಿರುವ ಭೂ ದೇವಿ ಸಮೇತನಾದ ಶ್ರೀಲಕ್ಷ್ಮೀ ವರಹನಾಥ ಸ್ವಾಮಿಯ ಮೂರ್ತಿಯ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದಾಗಿವೆ.ಇಂದು ಅಮಾವಾಸ್ಯೆ ಯಾದ್ದರಿಂದ ಶ್ರೀ ಕ್ಷೇತ್ರಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಎರಡು ಗಂಟೆಗಳ ಕಾಲ ನಡೆದ ಮಹಾ ನೀವೇಧನೆ ಕಾರ್ಯಕ್ರಮವನ್ನು ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾಧಿಗಳು ಕಣ್ತುಂಬಿಕೊಂಡರು.ಮಹಾನಿವೇಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್ ಮಾತನಾಡಿ ಬೇಡಿ ಬಂದಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ ಸ್ವಂತ ಸೂರಿಲ್ಲದ ಬಡ ಜನರಿಗೆ ಸ್ವಂತ ಮನೆಯನ್ನು ಭೂವರಹನಾಥ ಸ್ವಾಮಿಯು ಕರುಣಿಸಿ ಆಶೀರ್ವದಿಸುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರಕ್ಕೆ ಅಗಮಿಸುತ್ತಿರುವ ಭಕ್ತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದಿನ ಮಹಾ ನಿವೇದನೆ ಕಾರ್ಯಕ್ರಮಕ್ಕೆ 10ಸಾವಿರಕ್ಕೂ ಹೆಚ್ಚಿನ ಭಕ್ತರು ಆಗಮಿಸಿರುವುದೇ ಕ್ಷೇತ್ರದ ಮಹಿಮೆಯ ಬಗ್ಗೆ ಸಾರಿ ಹೇಳುತ್ತಿದೆ ಎಂದು ತಿಳಿಸಿದ ಅಂಬರೀಶ್ ಇನ್ನು ಮೂರು ವರ್ಷಗಳಲ್ಲಿ ಹೊಯ್ಸಳ ವಾಸ್ತು ಶಿಲ್ಪದ ಮಾದರಿಯಲ್ಲಿ ಮೂರು ಪ್ರಾಕಾರಗಳ ಭವ್ಯವಾದ ದೇವಾಲಯ ಹಾಗೂ 186ಅಡಿ ಎತ್ತರದ ಬೃಹತ್ ರಾಜಗೋಪುರ ನಿರ್ಮಾಣವಾಗಲಿದೆ ಎಂದು ಅಂಬರೀಶ್ ಹೇಳಿದರು.ಭೂವರಹನಾಥ ದೇವಾಲಯ ವ್ಯವಸ್ಥಾಪನ ಸಮಿತಿಯ ಟ್ರಸ್ಟಿ ಡಾ. ಶ್ರೀನಿವಾಸರಾಘವನ್ ಮಾತನಾಡಿ ಭಕ್ತರ ಸಹಕಾರದಿಂದ ಭವ್ಯವಾದ ದೇವಾಲಯ ನಿರ್ಮಾಣ ಹಾಗೂ ಅನ್ನದಾನ ಸೇವಾ ಕಾರ್ಯಕ್ರಮವು ತಪ್ಪದೇ ಪ್ರತಿದಿನವೂ ನಡೆಯುತ್ತಿದೆ. ಸ್ವಾಮಿಗೆ ಅಪಾರವಾದ ಶಕ್ತಿಯಿದೆ. ಬೇಡಿ ಬಂದ ಭಕ್ತರ ಕೋರಿಕೆಗಳು ಹಾಗೂ ಇಷ್ಟಾರ್ಥಗಳು ಶೀಘ್ರವಾಗಿ ಈಡೇರುತ್ತಿರುವುದರಿಂದ ಕ್ಷೇತ್ರದ ಮಹಿಮೆಯು ದೇಶದ ಉದ್ದಗಲಕ್ಕೂ ಹರಡುತ್ತಿದೆ ಎಂದು ಅಭಿಮಾನದಿಂದ ಹೇಳಿದರು.

*ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ*.