ನರಗುಂದ : ತಾಲೂಕಿನ ಕೊಣ್ಣೂರ ಗ್ರಾ.ಪಂ. ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಸಾಮೂಹಿಕ ಬದು ಕಾಮಗಾರಿ ಸ್ಥಳಕ್ಕೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಕೆ. ಇನಾಮದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಅವರು ಮಾತನಾಡಿ, ನರೇಗಾ ಯೋಜನೆಡಯಡಿ ಉದ್ಯೋಗ ಖಾತರಿ ಕೂಲಿ ಮೊತ್ತ 2025 ಏ.1ರಿಂದ 349 ರಿಂದ 370 ರೂ.ಗೆ ಹೆಚ್ಚಳವಾಗಿದೆ. ಕೂಲಿಕಾರರು ಗ್ರಾಪಂಗೆ ಕೆಲಸದ ಬೇಡಿಕೆ ಸಲ್ಲಿಸಿ, ಕೆಲಸ ಪಡೆಯಬೇಕು. ಉದ್ಯೋಗ ಖಾತರಿ ಯೋಜನೆಯಡಿ ವರ್ಷಕ್ಕೆ 100 ಮಾನವ ದಿನಗಳ ಕೆಲಸ ಮಾಡಲು ಅವಕಾಶವಿದ್ದು, ಎಲ್ಲರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕೂಲಿಕಾರರು ಅಳತೆಗೆ ಅನುಸಾರವಾಗಿ ಕೂಲಿ ಪಾವತಿಯಾಗುತ್ತದೆ. ಅಳತೆಗೆ ತಕ್ಕಂತೆ ಕೆಲಸ ಮಾಡಬೇಕು. ಪ್ರತಿ ದಿನ ಎನ್.ಎಂಎಂಎಸ್. ಎರಡು ಬಾರಿ ಹಾಜರಾತಿ ತೆಗೆದುಕೊಳ್ಳಲಾಗುತ್ತದೆ. ಕೂಲಿಕಾರರು ಎರಡು ಹಾಜರಾತಿಯನ್ನು ಕಡ್ಡಾಯವಾಗಿ ಪಾಲ್ಗೊಂಡು ಹಾಜರಾತಿ ಹಾಕಿಸಬೇಕು. ಒಂದು ವೇಳೆ ಬೆಳಗಿನ ಹಾಜರಾತಿ ಹಾಕಿಸಿ ಮದ್ಯಾಹ್ನದ ಹಾಜರಾತಿ ಹಾಕಿಸಲಿಲ್ಲ ಎಂದರೆ ನಿಮಗೆ ಆ ದಿನದ ಕೂಲಿ ಪಾವತಿಯಾಗುವುದಿಲ್ಲ ಎಂದು ತಿಳಿಸಿದರು.ಕೆಲಸ ಪ್ರಾರಂಭವಾಗಿದೆ ಎಂದು ಎನ್.ಎಂ.ಆರ್. ನಲ್ಲಿ ಹೆಸರು ಇಲ್ಲದೆ ಯಾವ ಕೂಲಿಕಾರರು ಕೆಲಸಕ್ಕೆ ಬರುವಂತಿಲ್ಲ. ಒಂದು ವೇಳೆ ಬಂದು ಅವರಿಗೆ ಕೂಲಿ ಹಣ ಪಾವತಿಯಾಗುವುದಿಲ್ಲ. ಹಾಗಾಗಿ ಕೂಲಿಕಾರರು NMR ಹಾಕಿಸಿ ಕೆಲಸಕ್ಕೆ ಬರುವಂತೆ ಕೂಲಿಕಾರರಿಗೆ ಸೂಚಿಸಿದರು.ಬೇಸಿಗೆಯಲ್ಲಿ ಅಂದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಇಲ್ಲದ ಕಾರಣ ನರೇಗಾ ಯೋಜನೆಯಡಿ ಕೆಲಸ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದ ಜನರು ಮತ್ತು ಕೂಲಿಕಾರರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಈ ವೇಳೆ ತಾಲೂಕು ತಾಂತ್ರಿಕ ಸಂಯೋಜಕ ಹನುಂತ ಡಂಬಳ, ತಾಂತ್ರಿಕ ಸಾಹಾಯಕ ಲಿಂಗರಾಜ ಮುದಿಗೌಡ್ರ, ಗ್ರಾ.ಪಂ. ಸಿಬ್ಬಂದಿಗಳು, ಗ್ರಾಮ ಕಾಯಕ ಮಿತ್ರರು, ಕಾಯಕಬಂಧುಗಳು ಇದ್ದರು.
ಬೇಸಿಗೆಯಲ್ಲಿ ಕೆಲಸ ಇಲ್ಲದ ಕಾರಣ ಖಾಲಿ ಕುಳಿತಿರುವ ಗ್ರಾಮೀಣ ಪ್ರದೇಶ ಜನರಿಗೆ ನರೇಗಾ ಯೋಜನೆಯಡಿ 13 ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿ ಸಾಮೂಹಿಕ ಕಾಮಗಾರಿ ಪ್ರಾರಂಭಿಸಿ ಸ್ಥಳೀಯವಾಗಿ ಕೆಲಸ ನೀಡುವ ಮೂಲಕ ಜನರ ಆರ್ಥಿಕವಾಗಿ ಸಬಲರನ್ನಾಗಿ ಮಾಡಲಾಗುತ್ತದೆ.

ಎಸ್.ಕೆ. ಇನಾಮದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು, ತಾ.ಪಂ. ನರಗುಂದ.