ಲಿಂಗಾಯತ ಸ್ವತಂತ್ರ ಧರ್ಮ ಮತ್ತು ಬಸವ ಸಂಸ್ಕೃತಿ ಅಭಿಯಾನ.

ಲಿಂಗಾಯತ ಸ್ವತಂತ್ರ ಧರ್ಮ ಮತ್ತು ಬಸವ ಸಂಸ್ಕೃತಿ ಅಭಿಯಾನ.

ಈ ಅಂಕಣ ಬರೆಯುವ ಹೊತ್ತಿನಲ್ಲಿ, ರಾಜ್ಯದಲ್ಲಿ ಮೆಗಾ ಈವೆಂಟ್ ಒಂದು ಮುಗಿದ ಸಡಗರ. ‌ಒಂದು ತಿಂಗಳಿನಿಂದ ರಾಜ್ಯದ ಮೂವತ್ತು ಜಿಲ್ಲೆಗಳನ್ನು ಸುತ್ತಿದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭ ಇಂದು ಅದ್ದೂರಿಯಾಗಿ ಸಂಪನ್ನಗೊಂಡಿದೆ. ನಿರೀಕ್ಷೆಗೂ ಮೀರಿ ಒಂದು ಲಕ್ಷ ಬಸವಾಭಿಮಾನಿಗಳು ಬೆಂಗಳೂರು ಅರಮನೆ ಮೈದಾನದಲ್ಲಿ ಸೇರಿ ನಿರಂತರ ಐದು ಗಂಟೆಗಳ ಕಾರ್ಯಕ್ರಮ ವೀಕ್ಷಣೆ ಮಾಡಿದ್ದು ಐತಿಹಾಸಿಕ ದಾಖಲೆ. ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಮೂರು ನೂರು ಜನ ಲಿಂಗಾಯತ ಮಠಾಧಿಪತಿಗಳ ಒಂದೇ ವೇದಿಕೆ ಮೇಲೆ ವಿರಾಜಮಾನರಾಗಿದ್ದ ದೃಶ್ಯ ನೋಡಲು ಅದ್ಭುತ. ಮುಖ್ಯವಾಗಿ ಹಿಂದುಳಿದ ಸಮಾಜದ ಬಸವ ಧರ್ಮ ಪೀಠಾಧಿಪತಿಗಳು ಒಮ್ಮನದಿಂದ ಸಮ್ಮಿಳನಗೊಂಡಿದ್ದರು.

ಮೂರು ಜನ ದಂಡನಾಯಕರಂತಿದ್ದ ಗದುಗಿನ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು ಹಾಗೂ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು, ತಮ್ಮೊಂದಿಗೆ ನೂರಾರು ಮಠಾಧಿಪತಿಗಳ ಸಮೂಹ ಕಟ್ಟಿಕೊಂಡು ಸಮಾರೋಪ ಸಮಾರಂಭವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ಬಸವ ಪ್ರೇಮಿ ಸಚಿವರಾದ ಎಂ.ಬಿ. ಪಾಟೀಲ ವಹಿಸಿಕೊಂಡು ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಕಾರಣರಾದರು. ಲಿಂಗಾಯತರಾದ ಎಂ.ಬಿ. ಪಾಟೀಲ- ಕಳೆದ ಬಾರಿಯ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದಲ್ಲಿ ಸಂಪೂರ್ಣ ಬೆಂಬಲ ನೀಡಿದ್ದ ಎಂ.ಬಿ. ಪಾಟೀಲ ತಂಡದವರ ಮೇಲೆ ಕಾಂಗ್ರೆಸ್ ಪಕ್ಷದ ಇನ್ನೊಂದು ಗುಂಪು ಆರೋಪ ಮಾಡಿತ್ತು. ಲಿಂಗಾಯತ ಧರ್ಮದ ಹೋರಾಟದಲ್ಲಿ ಭಾಗವಹಿಸಿದ್ದು ತಪ್ಪು ಎಂಬಂತೆ ಬಿಂಬಿಸಲಾಗಿತ್ತು. ಆದ್ದರಿಂದ ಎಂ.ಬಿ. ಪಾಟೀಲ ಅವರು ಹೋರಾಟದಿಂದ ಹಿಂದೆ ಸರಿದಿದ್ದರು. ಆದರೆ ಈ ಬಾರಿ ಬಸವ ಸಂಸ್ಕೃತಿ ಅಭಿಯಾನದ ಜೊತೆಗೆ ಪರೋಕ್ಷವಾಗಿ ಸೇರಿಕೊಂಡು ಬೆಂಬಲ ನೀಡಿದರು. ಅವರಿಗೆ ಆತ್ಮೀಯರಾದ ಡಾ. ಮಹಾಂತೇಶ ಬಿರಾದಾರ ಅವರು ಸಮಾರಂಭ ಯಶಸ್ವಿಯಾಗಲು ಪರಿಶ್ರಮಪಟ್ಟರು. ಅಲ್ಲದೆ ಈ ಬಾರಿ ಜಾತಿ ಗಣತಿಯ ಸಂದರ್ಭದಲ್ಲಿ ‘ನಾನು ಲಿಂಗಾಯತ ಎಂದು ಬರೆಸುತ್ತೇನೆ’ ಎಂದು ಸಚಿವರಾದ ಎಂ.ಬಿ. ಪಾಟೀಲ ಅವರು ಘೋಷಣೆ ಮಾಡಿದ್ದು ಅತ್ಯಂತ ಅಭಿಮಾನದ ಸಂಗತಿ. ಈ ಎದೆಗಾರಿಕೆಯನ್ನು ವಿವಿಧ ಪಕ್ಷಗಳಲ್ಲಿ ಇರುವ ಲಿಂಗಾಯತ ರಾಜಕೀಯ ನಾಯಕರು ತೋರಿಸಬೇಕಾಗಿತ್ತು. ಮುಂದಿನ ದಿನಗಳಲ್ಲಿ ಮಾನ್ಯ ಎಂ.ಬಿ. ಪಾಟೀಲ ಅವರು ಈ ಅಭಿಪ್ರಾಯಕ್ಕೆ ಬದ್ಧರಾಗಿರಲಿ ಎಂದು ಆಶಿಸುತ್ತೇನೆ. ಈ ಮಧ್ಯೆ ಹುಬ್ಬಳ್ಳಿ ಏಕತಾ ಸಮಾವೇಶದ ಸ್ವಾಮಿಗಳೊಬ್ಬರು, ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಎಚ್ಚರಿಸಿದ್ದರು. ಅದನ್ನು ಲೆಕ್ಕಿಸದೇ ಕಾರ್ಯಕ್ರಮದಲ್ಲಿ ಸಂಪೂರ್ಣ ಭಾಗವಹಿಸಿ, ಲಿಂಗಾಯತರ ಆತ್ಮವಿಶ್ವಾಸ ಹೆಚ್ಚಿಸಿದ ಮುಖ್ಯಮಂತ್ರಿಗಳು ಹಾಗೂ ಎಂ.ಬಿ. ಪಾಟೀಲ ಅವರು ಅಭಿನಂದನಾರ್ಹರು.

ಇಂದು ಈ ಸಭೆಯಲ್ಲಿ ಐದು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಎಂದಿನಂತೆ ಸರಾಗವಾಗಿ ಮಾತನಾಡಿದ ಮುಖ್ಯಮಂತ್ರಿಗಳು, ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಎಂದು ನಾಮಕರಣ, ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ, ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂಬ ಭರವಸೆಗಳನ್ನು ಈಡೇರಿಸಿದ ಸಾರ್ಥಕ ಭಾವಗಳನ್ನು ಹಂಚಿಕೊಂಡರು. ವಚನ ವಿಶ್ವವಿದ್ಯಾಲಯ ಆರಂಭದ ಭರವಸೆಯನ್ನು ನೀಡಿದರು. ಬೆಂಗಳೂರಿನ ನಮ್ಮ ಮೆಟ್ರೊಗೆ ಬಸವ ಮೆಟ್ರೋ ಎಂಬ ನಾಮಕರಣ ಇಡಲು ಕೇಂದ್ರದ ಅನುಮತಿ ಪಡೆಯುವೆ ಎಂದರು.ಜಾತಿ ವ್ಯವಸ್ಥೆಯ ಅಪಾಯ ಮತ್ತು ಬಸವ ತತ್ವದ ಆಚರಣೆಯ ವಿವರಣೆ ರಸವತ್ತಾಗಿತ್ತು. ಬಸವ ತತ್ವದ ಕುರಿತು ರಾಜಕೀಯ ಚಿಂತನೆ ಮಾಡಬೇಕಾದ ಬಹುಪಾಲು ರಾಜಕಾರಣಿಗಳು ವೇದಿಕೆ ಮೇಲೆ ಇರಲಿಲ್ಲ ಎಂಬುದು ಬೇಸರದ ಸಂಗತಿ. ‌ಶಾಸಕ ಬಿ.ಆರ್.‌ ಪಾಟೀಲ, ಸಚಿವರಾದ ಶರಣಪ್ರಕಾಶ ಪಾಟೀಲ, ಲಕ್ಷ್ಮೀ ಹೆಬ್ಬಾಳಕರ್ ಉಪಸ್ಥಿತರಿದ್ದರೆಂಬುದೊಂದು ಸಮಾಧಾನ. ‌

ಯಾವುದೇ ಬೇಡಿಕೆ ಮಂಡಿಸುವ ಅಗತ್ಯ ಇರಲಿಲ್ಲ ಎಂಬ ಭಾವನೆ ಮೂಡಿದ್ದು ಸಹಜ.ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಅರ್ಧದಷ್ಟು ಲಿಂಗಾಯತರು ತಮ್ಮ ಅಸ್ಮಿತೆ ಅರಿಯಲು ಈ ಅಭಿಯಾನ ಯಶಸ್ಸು ಸಾಧಿಸಿದೆ.‌ ರಾಜ್ಯದ ಪ್ರತಿ ಜಿಲ್ಲೆಯಿಂದ ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳ, ಬಸವ ಕೇಂದ್ರ, ವೀರಶೈವ ಲಿಂಗಾಯತ ಮಹಾಸಭೆ ಹಾಗೂ ಇತರ ಬಸವ ಪರ ಸಂಘಟನೆಯ ಅಭಿಮಾನಿಗಳು ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದು ತುಂಬಾ ವಿಶೇಷ. ಕಾಣದ ಕೈಯಾಗಿ ದುಡಿದ ಬೆಳಗಾವಿ ನಾಗನೂರು ಮಠದ ಪೂಜ್ಯರು- ಕಳೆದ ಬಸವ ಜಯಂತಿಯಂದು, ನಾವು ಅಂದುಕೊಂಡಂತೆ ವಚನ ಟಿವಿ ಕಚೇರಿಯನ್ನು ಬೆಳಗಾವಿಯ ತಮ್ಮ ಕಟ್ಟಡದಲ್ಲಿ ಆರಂಭ ಮಾಡಲು ಕಾರಣರಾದ ನಾಗನೂರ ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮಿಗಳು ಮೃದು ಮಾತಿನ ಕಾಯಕ ಜೀವಿಗಳು. ಆಧುನಿಕ ತಂತ್ರಜ್ಞಾನದ ಜೊತೆಗೆ ಬಸವ ಚಿಂತನೆ ಮತ್ತು ಇಷ್ಟಲಿಂಗದ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಲ್ಲಿ ಜಾಗ್ರತೆ ಮೂಡಿಸುವ ಅನೇಕ ಯೋಜನೆಗಳನ್ನು ತಮ್ಮ ಸಂಸ್ಥೆ ಮೂಲಕ ಸಾಧ್ಯವಾಗಿಸಿದ್ದಾರೆ. ನಿತ್ಯ ಬೆಳಿಗ್ಗೆ ವಿದ್ಯಾರ್ಥಿಗಳು ಸಾಮೂಹಿಕ ವಚನ ಪ್ರಾರ್ಥನೆ ಮತ್ತು ಇಷ್ಟಲಿಂಗ ಪೂಜೆಯಲ್ಲಿ ನಿರತರಾದ ದೃಶ್ಯ ಕಂಡು ಬೆರಗಾಗಿದ್ದೆ. ವಿವಿಧ ವಿಷಯದಲ್ಲಿ ಓದುತ್ತಿರುವ ಮಕ್ಕಳು ಇಷ್ಟಲಿಂಗ ದೃಷ್ಟಿ ಯೋಗದಿಂದ ಏಕಾಗ್ರತೆ ಸಾಧಿಸಬಹುದು ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವಲ್ಲಿ ಯಶಸ್ಸು ಸಾಧಿಸಿದ್ದಾರೆ.ಆಡಳಿತ ಮತ್ತು ಅಧ್ಯಾತ್ಮ ಸಮನ್ವಯ- ತೋಂಟದಾರ್ಯ ಮಠದ ಇಂದಿನ ಜಗದ್ಗುರುಗಳಾದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಅಧ್ಯಯನ, ಅಧ್ಯಾತ್ಮ ಚಿಂತನೆ, ಆಡಳಿತ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ಮೌಲ್ಯಗಳನ್ನು ಅರಿತವರಾಗಿದ್ದಾರೆ. ಎಂಜಿನಿಯರಿಂಗ್ ಕಾಲೇಜು ಆಡಳಿತ ವ್ಯವಸ್ಥೆ ಹೆಸರುವಾಸಿಯಾಗಲು ಇವರ ಇಚ್ಛಾಶಕ್ತಿಯೇ ಕಾರಣ. ಅರ್ಥಪೂರ್ಣ ವ್ಯವಹಾರ ಜ್ಞಾನ ಇವರ ಪ್ಲಸ್ ಪಾಯಿಂಟ್.

ಪ್ರತಿಯೊಬ್ಬರ ಅರ್ಹತೆಯನ್ನು ಬಹು ಬೇಗ ಗುರುತಿಸುತ್ತಾರೆ. ಅಧಿಕಾರದಲ್ಲಿ ಇರುವಾಗ ಓಲೈಸುವ ಜನರೇ ಹೆಚ್ಚು, ಆದರೆ who is who ಎಂದು ಅರಿಯುವ ಜಾಣ್ಮೆಯಿಂದ ಎಲ್ಲರನ್ನೂ ಸರಿಯಾಗಿ ಅಳೆದು ತೂಗುವ ಮೌನ ಜಾಣತನ. ‌ಯುವ ಯತಿಗಳ ಸಮಾಗಮ-ತಮ್ಮ ಸಮಕಾಲೀನ ಯುವ ಯತಿಗಳ ಸಮೂಹದೊಂದಿಗೆ ಬಸವ ತತ್ವ, ಲಿಂಗಾಯತ ಧರ್ಮದ ಆಚರಣೆಗೆ ನಿರಂತರ ಶ್ರಮಿಸುತ್ತಾರೆ. ಅತ್ಯಂತ ಯಶಸ್ವಿಯಾಗಿ ಮುಗಿದಿರುವ ‘ಲಿಂಗಾಯತ ಮಠಾಧಿಪತಿಗಳ ಒಕ್ಕೂಟ’ದ ‘ಬಸವ ಸಂಸ್ಕೃತಿ ಅಭಿಯಾನ’ದ ಬಹುಪಾಲು ಉಸ್ತುವಾರಿ ನಿರ್ವಹಣೆ ಮಾಡಿದರೂ, ಎಲ್ಲಿಯೂ ಪ್ರಚಾರ ಪಡೆಯದೆ ನೆಲದ ಮರೆಯ ನಿಧಾನದಂತೆ ಚೇತನ ಶಕ್ತಿಯಾಗಿ ಕಾರ್ಯ ನಿರ್ವಹಿಸಿ, ಹಿರಿಯ ಪೂಜ್ಯರುಗಳು ಮೆಚ್ಚುಗೆ ಗಳಿಸಿದ್ದಾರೆ. ಎಲ್ಲ ಯುವ ಯತಿಗಳನ್ನು ಒಗ್ಗೂಡಿಸಿಕೊಂಡು, ಇಡೀ ನಾಡನ್ನು ಸಂಚಾರ ಮಾಡಿ, ಮಠಾಧಿಪತಿಗಳ ನೈತಿಕ ಶಕ್ತಿಯನ್ನು ಹೆಚ್ಚಿಸಿದ್ದಾರೆ. ಬೆಂಗಳೂರಿನ ಸಮಾವೇಶ ರೂಪಿಸಲು ವೈಯಕ್ತಿಕ ಆಸಕ್ತಿಯಿಂದ ದುಡಿದಿದ್ದಾರೆ.

ಯಾರನ್ನೂ ನೆಚ್ಚದೆ, ಅವಲಂಬಿತರಾಗದೆ, ತಮ್ಮಷ್ಟಕ್ಕೆ ತಾವೇ ಕಾರ್ಯ ತಂತ್ರ ರೂಪಿಸಿ ಕ್ರಿಯಾಶೀಲತೆಯಿಂದ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ.ವಚನ ಟಿವಿಗೆ ನೈತಿಕ ಬೆಂಬಲ-ಹನ್ನೊಂದು ತಿಂಗಳ ಕೂಸು ‘ವಚನ ಟಿವಿ’ಯನ್ನು ಸಂರಕ್ಷಣೆ ಮಾಡುವ ಸಂಕಲ್ಪ ಅವರದು. ನಮ್ಮ ತಂಡದ ಯುವಕರನ್ನು ತಮ್ಮ ಪ್ರೀತಿ, ವಿಶ್ವಾಸದಿಂದ ನಿರಂತರ ಪ್ರೇರಣೆ ನೀಡಿ, ಲೈವ್ ಪ್ರಸಾರ ಯಶಸ್ವಿಯಾಗಲು ಮಾರ್ಗದರ್ಶನ ಮಾಡಿದ್ದಾರೆ. ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ನನ್ನ ಹೊಣೆಗಾರಿಕೆಯನ್ನು ಹಗುರಾಗಿಸಿದ್ದಾರೆ.ನಮ್ಮ ನಾಡಿನ ಯುವ ಮಠಾಧಿಪತಿಗಳು ಹೇಗಿರಬೇಕು? ಲಿಂಗಾಯತ ಧರ್ಮದ ತಳಹದಿಯ ಮೇಲೆ, ವಚನಗಳ ಮೂಲಕ ವ್ಯಕ್ತಿತ್ವ ಹೊಂದಿರಲಿ ಎಂಬ ಅನೇಕರ ಆಶಯಗಳಿಗೆ ಸ್ಪಂದಿಸಬೇಕು‌. ಆಧುನಿಕ ತಂತ್ರಜ್ಞಾನದ ಅಪಾಯಗಳಿಂದ ದೂರ ಸರಿದು, ನೈತಿಕ ಮೌಲ್ಯಗಳನ್ನು ಪ್ರತಿಪಾದಿಸಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಕಾರಣರಾಗಲಿ ಎಂಬ ಸದಾಶಯ ನಮ್ಮದು. ಈ ಹಿನ್ನೆಲೆಯಲ್ಲಿ ನಾಗನೂರು ಮಠದ ಪೂಜ್ಯರು ತಮ್ಮದೇ ಆದ ಸಮಾನ ಮನಸ್ಕರ ಪಡೆ ಹೊಂದಿದ್ದಾರೆ. ‌ಈ ಸಕಾರಾತ್ಮಕ ಗುಣಗಳನ್ನು ನಾನು ಸೂಕ್ಷ್ಮವಾಗಿ ಗಮನಿಸಿ ಸಂಭ್ರಮಿಸಿದ್ದೇನೆ. ಬೆಂಗಳೂರಿನ ಸಮಾವೇಶದ ಸಂಪೂರ್ಣ ಯಶಸ್ಸು ಮಹಾಂತ ಸ್ವಾಮಿಗಳು ಶೇಗುಣಸಿ , ಹಂದಿಗುಂದ ಹಾಗೂ ಅಥಣಿ ಸ್ವಾಮಿಗಳಿಗೆ ಸಲ್ಲುತ್ತದೆ. ಇದಕ್ಕೆ ಪೂರ್ಣ ಪ್ರೇರಕ ಶಕ್ತಿಯೆಂದರೆ ಡಾ. ಅಲ್ಲಮಪ್ರಭು ಸ್ವಾಮಿಗಳು.ವಚನ ಟಿವಿ ನೇರ ಪ್ರಸಾರ- ವಚನ ಸಂಸ್ಕೃತಿ ಅಭಿಯಾನದ ನೇರ ಪ್ರಸಾರ ಮಾಡುವ ಹೊಣೆಗಾರಿಕೆ ಹೊರುವ ಸಾಮರ್ಥ್ಯ ನಮಗೆ ಇರಲಿಲ್ಲ, ಆದರೆ ಆತ್ಮವಿಶ್ವಾಸ ಇತ್ತು.‌

ನಮ್ಮ ವಚನ ಟಿವಿಯ ಕ್ರಿಯಾಶೀಲ ಉದ್ಯೋಗಿಗಳಾದ ಕಾರಟಗಿ ಮೂಲದ ಅಮರವೀರ, ಹುಲಕೋಟಿಯ ಸಂದೀಪ್ ಆಗಬಹುದು ಎಂದ ಮೇಲೆ ಒಪ್ಪಿಕೊಂಡಾಯಿತು. ಮೂವತ್ತೊಂದು ದಿನಗಳು ಹೋಗಿದ್ದೇ ಗೊತ್ತಾಗಲಿಲ್ಲ. ನಮ್ಮ ವಚನ ಟಿವಿಯ ಗುಣಮಟ್ಟದ ಕುರಿತು ಜನ ಉತ್ಸಾಹದಿಂದ ಪ್ರತಿಕ್ರಿಯೆ ನೀಡಲಾರಂಭಿಸಿದರು. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವಾಹನ ಓಡಿಸಿಕೊಂಡು, ಮರುದಿನ ಲೈವ್ ಪ್ರಸಾರಕ್ಕೆ ಅಣಿಯಾಗುತ್ತಿದ್ದ ಈ ಯುವ ಪಡೆಯನ್ನು ತಮ್ಮ ಮಾತುಗಳ ಮೂಲಕ ಆಶೀರ್ವಾದ ಮಾಡಿದ ಸಾಣೇಹಳ್ಳಿ, ಶೇಗುಣಸಿ, ಹಂದಿಗುಂದ, ಬೆಳಗಾವಿ, ಇಲಕಲ್ಲ ಹಾಗೂ ಇತರ ಪೂಜ್ಯರುಗಳ ಬೆಂಬಲ ಅವಿಸ್ಮರಣೀಯ. ಒಂದು ತಿಂಗಳಲ್ಲಿ ಸರಾಸರಿ ಆರು ಲಕ್ಷ ವೀಕ್ಷಕರು ವಚನ ಟಿವಿಯ ಬಾಗಿಲು ತಟ್ಟಿ ಒಳ ಪ್ರವೇಶ ಮಾಡಿದ್ದಾರೆ. ಇಂದು ಸಮಾರೋಪ ಸಮಾರಂಭದಲ್ಲಿ ವಚನ ಟಿವಿಯ ಸಾಧನೆಯನ್ನು ಮುಕ್ತವಾಗಿ ಹೊಗಳಿದ್ದಾರೆ. ವೇದಿಕೆ ಬಿಟ್ಟು ಇಳಿದ ಮೇಲೆ ನೂರಾರು ಜನ ಫೋಟೋ ತೆಗೆಸಿಕೊಂಡು ವಚನ ಟಿವಿ ಮಾಡುತ್ತಿರುವ ಕಾರ್ಯಕ್ಕೆ ಬೆಂಬಲ ನೀಡಿದ್ದಾರೆ. ಈ ಕ್ರೆಡಿಟ್ ಖಂಡಿತವಾಗಿ ನನಗೆ ಬೇಡವೇ ಬೇಡ. ಮಠಾಧಿಪತಿಗಳ ಒಕ್ಕೂಟದ ಪೂಜ್ಯರುಗಳು ಹಾಗೂ ಐದು ಜನ ಯುವ ತಂತ್ರಜ್ಞರಿಗೆ ಸಲ್ಲುತ್ತದೆ. ‌ಮುಂದಿನ ತಿಂಗಳು ವಚನ ಟಿವಿ ಒಂದು ವರ್ಷ ಪೂರೈಸುತ್ತದೆ. ಇಲ್ಲಿಯವರೆಗೆ ಇಪ್ಪತ್ತೆರಡು ಲಕ್ಷ ಜನ ವೀಕ್ಷಿಸಿ, ಮೆಚ್ಚುಗೆ ಸೂಚಿಸಿದ್ದಾರೆ. ಕೆಲವರು ಅಷ್ಟೇ ಕೆಟ್ಟದಾಗಿ ಕಾಮೆಂಟಿಸಿದ್ದಾರೆ. ಅಪಪ್ರಚಾರ ಮಾಡಿದ್ದೂ ನಮ್ಮ ಶಕ್ತಿಯನ್ನು ಹೆಚ್ಚಿಸಿದೆ. ಬೆಂಗಳೂರು ಮೂಲದ ಇಬ್ಬರು ಬಸವ ಭಕ್ತರು ಕೆಲ ಅನುಮಾನ ವ್ಯಕ್ತಪಡಿಸಿದ್ದಾರೆ. ‘ನೀರು ಕುಡಿಯುತ್ತ’ ವಚನ ಸಾಹಿತ್ಯದ ಕೆಲಸ ಮಾಡುವ ವ್ಯಕ್ತಿ ತುಂಬಾ ಹಗುರವಾಗಿ ಮಾತನಾಡಿ ನಮ್ಮ ಜವಾಬ್ದಾರಿ ಮತ್ತು ಎಚ್ಚರಿಕೆಯನ್ನು ಹೆಚ್ಚಿಸಿದ್ದಾರೆ. ಅವರಿಗೆ ಸಾವಿರದ ಪ್ರಣಾಮಗಳು. ನಾನು ಕೋಮುವಾದಿಗಳ ಭಕ್ತ, ಅವರ ಸಖ್ಯ ಹೊಂದಿದ್ದೇನೆ ಎಂಬ ಅನುಮಾನಕ್ಕೆ ನನ್ನ ವಿಡಿಯೋಗಳೇ ಉತ್ತರ ನೀಡುತ್ತವೆ.‌ ಗದಗ, ಸಾಣೇಹಳ್ಳಿ, ಇಲಕಲ್ಲ, ಬೆಳಗಾವಿ, ಶೇಗುಣಸಿ, ಅಥಣಿ, ಹಂದಿಗುಂದ, ಆಳಂದ ಹಾಗೂ ಇತರ ಪ್ರಮುಖ ಮಠಾಧಿಪತಿಗಳ ನಿರಂತರ ಆಶೀರ್ವಾದ ಮಾತ್ರ ಬೇಡಿದ್ದೇನೆ, ಮತ್ತೇನನ್ನೂ ಅಲ್ಲ ಎಂಬುದನ್ನು ನಮ್ರವಾಗಿ ಹೇಳುತ್ತೇನೆ. ನಮ್ಮ ಕೆಲಸಗಳು ಉತ್ತರ ಕೊಡಬೇಕು, ನಾವಲ್ಲ. ವಾರ್ಷಿಕೋತ್ಸವದ ನಂತರ ನೂರಾರು ಯೋಚನೆ, ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ನಾಡಿನ ಬಸವ ಪರ ಸಂಘಟನೆಗಳ ಶ್ರೀರಕ್ಷೆಯಿಂದ ವಚನ ವಾಹಿನಿ ಕೋಟ್ಯಂತರ ಮನಸುಗಳ ತಲುಪಲಿದೆ.‌ ಇದಕ್ಕೆ ಬಹುದೊಡ್ಡ ಉದಾಹರಣೆ ಅಭಿಯಾನದ ನೇರ ಪ್ರಸಾರ ಮತ್ತು ಅದರ ಗುಣಮಟ್ಟ. ಮುಂದೆಯೂ ಅದೇ ಭೌತಿಕ, ಬೌದ್ಧಿಕ ಗುಣಮಟ್ಟ ಇಟ್ಟುಕೊಂಡು ಸಾವಿರದ ಹೆಜ್ಜೆ ಸಾಗುತ್ತೇವೆ.

ನಿಮ್ಮೊಂದಿಗೆ…ಪ್ರೊ. ಸಿದ್ದು ಯಾಪಲಪರವಿ

One thought on “ಲಿಂಗಾಯತ ಸ್ವತಂತ್ರ ಧರ್ಮ ಮತ್ತು ಬಸವ ಸಂಸ್ಕೃತಿ ಅಭಿಯಾನ.

Leave a Reply

Your email address will not be published. Required fields are marked *