
*ಒಳ ಮೀಸಲಾತಿಗೆ ಜಾರಿಗೆ ಒತ್ತಾಯಿಸಿಶಾಸಕ ಹಿಟ್ನಾಳ್ ನಿವಾಸದ ಮುಂದೆ ತಮಟೆ ಚಳುವಳಿ*
ಕೊಪ್ಪಳ : ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಮನೆಯ ಮುಂದೆ ಒಳ ಮೀಸಲಾತಿ ಜಾರಿಗೆ ಸದನದಲ್ಲಿ ಧ್ವನಿ ಎತ್ತುವಂತೆ ಆಗ್ರಹಿಸಿ ತಮಟೆ ಚಳುವಳಿ ನಡೆಸಲಾಯಿತು.ನಗರದ ಈಶ್ವರ್ ಪಾರ್ಕಿನಿಂದ ತಮಟೆ ಚಳುವಳಿ ನಡೆಸಿ ರಕ್ತದಿಂದ ಪೋಸ್ಟರ್ ಬರೆದು ಒಳಮೀಸಲಾತಿ ಕೂಡಲೇ ಜಾರಿಯಾಗಬೇಕು, ಜಿಲ್ಲೆಯ ಎಲ್ಲಾ ಶಾಸಕರು ಸದನದಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸುತ್ತಾ ಶಾಸಕರ ನಿವಾಸದ ಮುಂದೆ ಎಲ್ಲಾ ಮುಖಂಡರು ಪ್ರತಿಭಟನೆ ನಡೆಸಿ ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.ನಂತರ ಸ್ಥಳಕ್ಕೆ ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಆಗಮಿಸಿ ಸಹೋದರ ಕೆ. ರಾಘವೇಂದ್ರ ಹಿಟ್ನಾಳಗೆ ಸದನದಲ್ಲಿ ಮಾತಾಡುವಂತೆ ಫೋನ್ ಮೂಲಕ ತಿಳಿಸಿ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಯಾವಾಗಲೂ ಇದೆ, ನೀವು ಎಲ್ಲಿ ಕರೆದರೂ ಹೋರಾಟಕ್ಕೆ ಬರುವುದಾಗಿ ಹೇಳಿದರು.ನಂತರ ಮಾದಿಗ ಸಮಾಜದ ಯುವ ಮುಖಂಡ ಗಣೇಶ್ ಹೊರತಟ್ನಾಳ್ ಮನವಿ ಪತ್ರ ನೀಡಿ ಮಾತನಾಡಿ ಒಳ ಮೀಸಲಾತಿಗಾಗಿ ನಾಗಮೋಹನ್ ದಾಸ್ ವರದಿಯನ್ನು ಕೂಡಲೇ ಯಥಾರೀತಿ ಜಾರಿ ಮಾಡವಂತೆ ಈಗಾಗಲೇ ಮನವಿ ಮಾಡಿದ್ದು, ಸರ್ಕಾರ ವಿಳಂಬ ನೀತಿ ಅನುಸರಿಸಿದೆ, ಒಳಮೀಸಲಾತಿ ಜಾರಿಗೆ ರಾಜಕೀಯ ಮಾಡಿದ್ರೆ ರಕ್ತಪಾತ ಆಗುತ್ತೆ ಎಂದು ಎಚ್ಚರಿಸಿದ ಅವರು ಸುದೀರ್ಘ ಮೂರು ದಶಕಗಳಿಂದ ಒಳ ಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯ ಹೋರಾಟ ಮಾಡುತ್ತಲೇ ಇದೆ, ಕಾಂಗ್ರೆಸ್ಸಿನ ಸಿದ್ದರಾಮಯ್ಯ ಸರ್ಕಾರ ಚುನಾವಣೆ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ ಒಳಮೀಸಲಾತಿ ಭರವಸೆಯನ್ನು ಮಾತಿನಂತೆ ಈಡೇರಿಸಲಿ, ಕೊಟ್ಟ ಮಾತಿನಂತೆ ನಾಗಮೋಹನ್ ದಾಸ್ ವರದಿಯನ್ನು ಯಥಾರೀತಿ ಜಾರಿ ಮಾಡಲಿ, ಆಗಸ್ಟ್ 16 ಎಂದು ಹೇಳಿದ ಸರ್ಕಾರ ಆಗಸ್ಟ್ 19ಕ್ಕೆ ಮುಂದೂಡಿದೆ, ಇದರಲ್ಲಿ ಏನೋ ಹುನ್ನಾರ ಅಡಿಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇದು ಕಾಂಗ್ರೆಸ್ ನ ವಿಳಂಬ ನೀತಿ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.ಸಿದ್ದರಾಮಯ್ಯನವರು 2013-2018ವರೆಗೆ ಸಿಎಂ ಇದ್ದಾಗಲೂ ವಿಳಂಬ ಧೋರಣೆ ಅನುಸರಿಸಿದ್ದಾರೆ. ಆಗಸ್ಟ್ 1ಕ್ಕೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಒಂದು ವರ್ಷ ಕಳೆದ್ರೂ, ಸಿದ್ದರಾಮಯ್ಯ ಸರ್ಕಾರ ಇನ್ನು ವಿಳಂಬ ನೀತಿ ಅನುಸರಿಸುತ್ತಿದೆ. ಒಳಮೀಸಲಾತಿ ಜಾರಿಯಾಗದೇ, ನೇಮಕಾತಿಗಳು ಸಹ ನೆನಗುದಿಗೆ ಬಿದ್ದಿದೆ, ಸಿದ್ದರಾಮಯ್ಯ ಸರ್ಕಾರ ಕಾಲಹರಣ ನೀತಿಯನ್ನು ಪಕ್ಕಕ್ಕೆ ಇಟ್ಟು ಆಗಸ್ಟ್ 19 ಕ್ಕೆ ಒಳಮೀಸಲಾತಿ ಜಾರಿ ಮಾಡಬೇಕು, ಇಲ್ಲವಾದರೆ ಉಗ್ರಹೋರಾಟ ಖಚಿತ ಎಂದರು.ಇನ್ನೋರ್ವ ಮಾದಿಗ ಮುಖಂಡ ಮಲ್ಲಿಕಾರ್ಜುನ ಪೂಜಾರ ಮಾತನಾಡಿ ಆಗಸ್ಟ್ 19 ನೇ ದಿನಾಂಕದಂದು ಸರಕಾರ ಶಿಫಾರಸ್ಸು ಮಾಡಿ ಗೌರವಾನ್ವಿತ ರಾಜ್ಯಪಾಲರ ಅಂಕಿತ ಬೀಳದಿದ್ದರೆ ಕೊಪ್ಪಳ ಜಿಲ್ಲೆ ಬಂದ್ ಕರೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.ಮಾದಿಗ ಸಮುದಾಯದ ಮುಖಂಡರಾದ ಹನುಮೇಶ್ ಕಡೆಮನಿ, ಯಲ್ಲಪ್ಪ ಹಳೇಮನಿ ಮುದ್ಲಾಪುರ್, ರಾಮಣ್ಣ ಚೌಡಕಿ, ದ್ಯಾಮಣ್ಣ ಪೂಜಾರ್, ಪರಶುರಾಮ್ ಕೆರೆಹಳ್ಳಿ, ಗಾಳೆಪ್ಪ ಹಿಟ್ನಾಳ್, ಸಿದ್ದು ಮಣ್ಣಿನವರ್, ಮಹಾಲಕ್ಷ್ಮಿ ಕಂದಾರಿ, ಯಂಕಪ್ಪ ಹೊಸಳ್ಳಿ, ಹನುಮಂತಪ್ಪ ಮ್ಯಾಗಳ ಮನಿ, ನಿಂಗಪ್ಪ ಮೈನಳ್ಳಿ, ಮಂಜುನಾಥ್ ಮುಸಲಾಪುರ, ಮಾರುತೆಪ್ಪ ಬಿಕನಳ್ಳಿ, ಚಂದ್ರ ಸ್ವಾಮಿ ಬಹದ್ದೂರ್ ಬಂಡಿ, ಶಂಕರ್ ನರೇಗಲ್, ಸುಧೀರ್ ಕಾತರಕಿ, ಗಾಳೆಪ್ಪ ಹಿರೇಮನಿ, ಬಸವರಾಜ್ ಮ್ಯಗಳಮನಿ, ಸಂತೋಷ್ ಕಾತರಿಕಿ ಇತರರು ಇದ್ದರು.
