

ರೋಣ: ಹಿಂದೂ ಹಾಗೂ ಮುಸ್ಲಿಮರ ಭಾವೈಕ್ಯತೆಯ ಹಬ್ಬ ಎಂದರೆ ಮೊಹರಂ, ತ್ಯಾಗ ಬಲಿದಾನದ ಸಂಕೇತವಾದ ಮೊಹರಂ ಹಬ್ಬವನ್ನು ಮುಸ್ಲಿಮರು ಇಲ್ಲದ ಊರಲ್ಲಿ ಹಿಂದೂಗಳಿಂದ ಅಚರಿಸುತ್ತಾ ಬಂದಿರುವುದು ವಿಶೇಷವಾಗಿದೆ.ತಾಲೂಕಿನ ತಳ್ಳಿಹಾಳದಲ್ಲಿ 7೦೦ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗ್ರಾಮದಲ್ಲಿ ಮೊದಲಿನಿಂದಲೂ ಮುಸ್ಲಿಮ್ ಕುಟುಂಬವು ನೆಲೆಯೂರಿಲ್ಲ. ಹೀಗಾಗಿ ಇತರೆ ಧರ್ಮದ ಹಿಂದುಗಳು ಸೇರಿಕೊಂಡು ಸಾಂಪ್ರದಾಯಿಕವಾಗಿ ಸುಮಾರು ವರ್ಷಗಳಿಂದ ಮೊಹರಂ ಆಚರಿಸುತ್ತ ಬಂದಿದ್ದಾರೆ. ಮೊಹರಂ ಹಬ್ಬ ಸಮೀಪಿಸುತ್ತಲೇ ಗ್ರಾಮಸ್ಥರು ತಮ್ಮ ಮನೆಗಳನ್ನು ಶುಚಿಗೊಳಿಸಿ ಸಿಂಗರಿಸಿಕೊಂಡು ಶ್ರೀ ಹಣಮಂತ ದೇವಸ್ಥಾನದ ಹತ್ತಿರವಿರುವ ಮಸೀದಿಗಳಲ್ಲಿ ಫಾತಿಮಾ, ಲಾಲ್‌ಸಾಬ್, ಚಾಂದ್‌ಲಾಲ್ ಹಾಗೂ ಹಸೇನ್ ಹುಸೇನ್ ಪೀರಲು ದೇವರನ್ನು ಪ್ರತಿಷ್ಠಾಪಿಸಲಾಗುತ್ತದೆ.ಮೊಹರಂ ಹಬ್ಬದ ಗಂಧ ರಾತ್ರಿ ದಿನದಂದು: ಸಮೀಪದ ಬಳಗೋಡ ಗ್ರಾಮಸ್ಥರು ಈ ಗ್ರಾಮಕ್ಕೆ ಫಾತಿಮಾ, ಅಲಾಯಿ ದೇವರು ಹೊತ್ತಿಕೊಂಡು ಬಂದ ಭಕ್ತರು ಕೋಲಾಟ ಹೆಜ್ಜೆ ಮೇಳ, ಸಂಗೀತ ಮೇಳದೊಂದಿಗೆ ಗ್ರಾಮಕ್ಕೆ ಅವರದೇ ಆದ ವೈಶಿಷ್ಟ್ಯದೊಂದಿಗೆ ಪ್ರದರ್ಶನ ಮಾಡುವ ಪದ್ದತಿ ಸುಮಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.ಗಂಧ ರಾತ್ರಿಯ ದಿನದಂದು ಅಗ್ನಿ ಪ್ರವೇಶ ಮಾಡುವುದರ ಜೊತೆಗೆ ಬೆಳೆ ಮಳೆ ಸೇರಿದಂತೆ ಭಕ್ತರ ಇಷ್ಟಾರ್ಥವನ್ನು ಅಲಾಯ್ ದೇವರು ಪೂರೈಸುತ್ತಾನೆ ಎಂದು ಭಕ್ತರಲ್ಲಿ ನಂಬಿಕೆಯಿದೆ. ಮೊಹರಂ ಹಬ್ಬದ ಮೊದಲ ದಿನದಂದು ಭಕ್ತರು ಮಸೀದಿಗೆ ಆಗಮಿಸಿ ಸಕ್ಕರೆ ಹಂಚುವುದು,ಮಕ್ಕಳಿಗೆ ಲಾಡಿ ಹಾಕುವ ಮೂಲಕ ಭಾವೈಕ್ಯತೆ ಮೆರೆಯುತ್ತಾರೆ.ಕೋಟ್:ಗ್ರಾಮದಲ್ಲಿ ಒಂದೂ ಮುಸ್ಲಿಂ ಮನೆತನಗಳಿಲ್ಲ. ಹಿಂದೂಗಳ ನೇತೃತ್ವದಲ್ಲಿ ಮೊಹರಂ ಆಚರಣೆ ನಡೆಸುತ್ತಿರುವುದು ಗ್ರಾಮಸ್ಥರ ಸೌಹಾರ್ಯದತೆಗೆ ಸಾಕ್ಷಿ ಆಗಿದೆ.ಬೇಡಿ ಬಂದವರಿಗೆ ಅಲಾಯ್ ದೇವರು ಒಳಿತು ಮಾಡಿದೆ. ರೋಗ-ರುಜಿನ, ಮಕ್ಕಳು ಆಗದವರು ಇಲ್ಲಿ ಹರಿಕೆ ತೀರಿಸಿದರೆ ದೇವರು ಅವರ ಬೇಡಿಕೆ ಈಡೇರಿಸಿದ್ದಾನೆ ಎಂಬ ನಂಬಿಕೆ ಇದೆ.-ಶರಣಪ್ಪ ಪೂಜಾರ ಗ್ರಾ.ಪಂ. ಮಾಜಿ ಸದಸ್ಯ

ಕೋಟ್: ಅಲಾಯಿ ದೇವರ ಪ್ರತಿಷ್ಠಾಪನೆಯಿಂದ ಹಿಡಿದು ದೇವರನ್ನು ಮೆರವಣಿಗೆ ಮಾಡುವ ಮೂಲಕ ಮೊಹರಂ ಆಚರಣೆಯ ಎಲ್ಲ ಧಾರ್ಮಿಕ ವಿಧಿ ವಿಧಾನಗಳನ್ನು ಹಿಂದೂಗಳೇ ನೆರವೇರಿಸುತ್ತಿರುವುದು ಭಾವೈಕ್ಯತೆಗೆ ಸಾಕ್ಷಿಯಾಗಿದೆ-ಶರಣಪ್ಪ ಭೂಮಣ್ಣವರ (ಗ್ರಾ.ಪಂ ಸದಸ್ಯ)
