
..ಕೊಚ್ಚಿಹೋದ ಕಚ್ಚಾ ರಸ್ತೆ ಸ್ಥಳಕ್ಕೆ ಪಾಟೀಲ ಭೇಟಿ ಸಮಸ್ಯೆ ಪರಿಶೀಲನೆ
ಅಫಜಲಪುರ: ಮಳೆಯು ಜೀವನಕ್ಕೆ ಹಸಿರು ಹೊತ್ತು ತರುವುದರ ಜೊತೆಗೆ ಕೆಲವೊಮ್ಮೆ ಸಂಕಷ್ಟವನ್ನೂ ತರುತ್ತದೆ ಎಂಬುದಕ್ಕೆ ತಾಲ್ಲೂಕಿನ ಮಣ್ಣೂರ–ಕರಜಗಿ ನಡುವಿನ ಘಟನೆ ಸಾಕ್ಷಿಯಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಭಾಗದಲ್ಲಿ ಪರ್ಯಾಯ ವ್ಯವಸ್ಥೆಗಾಗಿ ನಿರ್ಮಿಸಿದ್ದ ಕಚ್ಚಾ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ.

ಕಿರುಹಳ್ಳದ ಹೊಳೆ ನೀರು ಅಬ್ಬರಿಸಿದಂತೆ ಈ ತಾತ್ಕಾಲಿಕ ರಸ್ತೆ ಮಾಯವಾಗಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.ಈ ದಾರಿಯನ್ನು ಬಳಸುತ್ತಿದ್ದ ರೈತರು, ವಿದ್ಯಾರ್ಥಿಗಳು ಹಾಗೂ ದಿನನಿತ್ಯ ಪ್ರಯಾಣಿಕರು ದೊಡ್ಡ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ದೂರದ ಸುತ್ತು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ಜನಸಾಮಾನ್ಯರ ಅಸಹಾಯಕ ಸ್ಥಿತಿ ಗಮನಕ್ಕೆ ಬಂದ ತಕ್ಷಣ ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ ಸ್ಥಳಕ್ಕೆ ಧಾವಿಸಿ ಸಮಸ್ಯೆಯ ಗಂಭೀರತೆ ಅರಿತುಕೊಂಡರು. ಅಧಿಕಾರಿಗಳೊಂದಿಗೆ ನೇರವಾಗಿ ಮಾತನಾಡಿ ತಕ್ಷಣವೇ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.“ಜನರು ಅನಗತ್ಯ ಕಷ್ಟ ಅನುಭವಿಸಬಾರದು. ತಾತ್ಕಾಲಿಕವಾದರೂ ಬಲವಾದ, ಸುಸಜ್ಜಿತ ರಸ್ತೆ ಮಾಡಬೇಕು” ಎಂದು ಪಾಟೀಲ ತಿಳಿಸಿದ್ದಾರೆ.

ಮಳೆಗಾಲದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಬಂದಿರುವ ಅಡೆತಡೆ ಜನಜೀವನವನ್ನು ಕಾಡಬಾರದು ಎಂಬ ನಿಲುವನ್ನು ಅವರು ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಪ್ರಕಾಶ ಜಮಾದಾರ ಸೇರಿದಂತೆ ರೈತರು, ಅಧಿಕಾರಿಗಳು, ಗ್ರಾಮಸ್ಥರು ಇದ್ದರು.
